ಸಿದ್ದಾಪುರ, ಮಾ. 20: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳ್ಳರು ನುಗ್ಗಿ ನಗದು ಸೇರಿದಂತೆ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದಲ್ಲಿ ನಡೆದಿದೆ.ನೆಲ್ಯಹುದಿಕೇರಿ ಬೆಟ್ಟದಕಾಡು ನಿವಾಸಿಯಾಗಿರುವ ರಾಮಲಿಂಗ, ಪತ್ನಿ, ಮಕ್ಕಳು ಕೆಲಸಕ್ಕೆ ಹೋಗಿರುವ ಸಂದರ್ಭದಲ್ಲಿ ಕಳ್ಳರು ಮನೆಯ ಮೇಲ್ಚಾವಣಿಯ ಹೆಂಚುಗಳನ್ನು ತೆಗೆದು ಒಳಕ್ಕೆ ನುಗ್ಗಿ ಆಲ್ಮೇರಾದ ಬೀಗ ಮುರಿದು ಆಲ್ಮೇರಾದಲ್ಲಿಟ್ಟಿದ್ದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳತನ ಮಾಡಿರುವದಾಗಿ ರಾಮಲಿಂಗ ಪುಕಾರು ನೀಡಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮಲಿಂಗ ಬಾಡಿಗೆಗೆ ಇರುವ ಮನೆಯ ಮಾಲೀಕ ಚಂದ್ರನ್ ಕೇರಳದ ದೇವಾಲಯಕ್ಕೆ ತೆರಳಿದ್ದು, ಅವರ ಮನೆಯಲ್ಲಿ ಕೂಡ ಕಳ್ಳತನಕ್ಕೆ ಯತ್ನಿಸಿರುವದಾಗಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.