ವೀರಾಜಪೇಟೆ, ಮಾ. 21: ಕೊಡಗಿನ ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಚುನಾಯಿತ ಶಾಸಕರಿಲ್ಲದಿದ್ದರೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೊಡಗಿನ ಸರ್ವ ರೀತಿಯ ಅಭಿವೃದ್ಧಿಗೆ ಸ್ಪಂದಿಸಿದೆ ಎಂದು ಕೊಡಗಿನ ಉಸ್ತುವಾರಿ ಸಚಿವ ಎಂ.ಎಂ.ಸೀತಾರಾಂ ಹೇಳಿದರು.
ವೀರಾಜಪೇಟೆಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಒತ್ತಿನಲ್ಲಿ ರಾಜ್ಯ ಸರಕಾರದ ‘ಹಸಿವು ಮುಕ್ತ’ ಯೋಜನೆಯಡಿಯಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವರು ರಾಜ್ಯದ ಎಲ್ಲ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಯಶಸ್ಸನ್ನು ಕಂಡಿದೆ. ಕ್ಯಾಂಟೀನ್ನಿಂದ ಬಡವರು, ಹಿಂದುಳಿದ ವರ್ಗದವರು, ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ. ಇನ್ನು ರಾಜ್ಯದ 21 ತಾಲೂಕುಗಳಲ್ಲಿ ಕ್ಯಾಂಟೀನ್ ಆರಂಭಿಸಲು ಬಾಕಿ ಇದ್ದು ಸದÀ್ಯದಲ್ಲಿಯೇ ಎಲ್ಲ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ಗಳ ಪ್ರಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ಸೂತ್ರ ಹಿಡಿದ ನಂತರ ಹಂತ ಹಂತಗಳಲ್ಲಿ ರೂ. 200 ಕೋಟಿ ಹಣದ ಜನಪರ ಅಭಿವೃದ್ಧಿ ಕಾಮಗಾರಿಗೆ ಒತ್ತು ನೀಡಲಾಗಿದೆ ಎಂದರು.
ಇದೇ ಸಂದರ್ಭ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸದಸ್ಯ ಅರುಣ್ ಮಾಚಯ್ಯ, ಪಕ್ಷದ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಪಕ್ಷದ ಬ್ಲಾಕ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಪ್ರಮುಖರಾದ ಹರೀಶ್ ಬೋಪಣ್ಣ, ಚಂದ್ರಮೌಳಿ, ಜಿ.ಜಿ. ಮೋಹನ್, ಎಂ.ಎಂ. ಶಶಿಧರನ್, ಪಟ್ಟಣ ಪಂಚಾಯಿತಿ ಸದಸ್ಯೆ ಶೀಬಾ ಪ್ರಥ್ವಿನಾಥ್, ನಾಗಮ್ಮ, ರತಿ ಬಿದ್ದಪ್ಪ, ನಾಮಕರಣ ಸದಸ್ಯರುಗಳಾದ ಪಟ್ಟಡ ರಂಜಿ ಪೂಣಚ್ಚ, ಡಿ.ಪಿ. ರಾಜೇಶ್, ಮಹಮ್ಮದ್ ರಾಫಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಅಭಿಯಂತರ ಹೇಮ್ ಕುಮಾರ್, ಮತ್ತಿತರರು ಹಾಜರಿದ್ದರು.