ಮಡಿಕೇರಿ, ಮಾ. 21: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಪೂರ್ಣ ಕಟ್ಟಡಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿರುವ ಕ್ರಮವನ್ನು ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ವಿರೋಧಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, ನಗರಸಭಾ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಹೈಟೆಕ್ ಮಾರುಕಟ್ಟೆ 7 ವರ್ಷಗಳಿಂದ ಕುಂಟುತ್ತಾ ಸಾಗಿ ಈಗ ಒಂದು ಹಂತಕ್ಕೆ ಬಂದಿದೆಯಷ್ಟೇ, ಮಾರುಕಟ್ಟೆ ಪ್ರವೇಶಿಸಲು ರ್ಯಾಂಪ್, ಶೌಚಾಲಯ, ಚರಂಡಿ ವ್ಯವಸ್ಥೆ ಇನ್ನೂ ಕೂಡ ಆಗಿಲ್ಲ. ಉದ್ಘಾಟನೆ ಮಾಡಿದ ನಂತರ ವ್ಯಾಪಾರಿಗಳಿಗೆ ಬಿಟ್ಟು ಕೊಡಬೇಕು. ಆದರೆ ಸೌಲಭ್ಯ ಕಲ್ಪಿಸದೆ ಬಿಟ್ಟುಕೊಟ್ಟರೆ ತೊಂದರೆ ಅನುಭವಿಸಬೇಕಾಗುತ್ತದೆ. ಹೆಚ್ಚುವರಿ 80 ಲಕ್ಷ ಅನುದಾನ ಬಿಡುಗಡೆಗೊಳಿಸಿ ಪೂರ್ಣಗೊಳಿಸದೆ ಉದ್ಘಾಟನೆಗೆ ಮುಂದಾಗಿರುವದು ಸರಿಯಲ್ಲ ಎಂದು ಹೇಳಿದ್ದಾರೆ.
ಬಸ್ ನಿಲ್ದಾಣ ಕೆಲಸ ಬಹಳಷ್ಟು ಬಾಕಿ ಇದೆ. ಇನ್ನೂ ಕೂಡ ಬಸ್ ಮಾಲೀಕರ ಸಭೆ ಕರೆಯದೆ ಮಾರ್ಗ ಕೂಡ ನಿಗದಿಯಾಗಿಲ್ಲ. ಆದರೂ ಉದ್ಘಾಟನೆ ಮಾಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್ ‘ರೆಡಿಮೇಡ್ ಕೇಕ್’ ಆಗಿದ್ದು, ಇದು ಒಂದು ಮಳೆಗಾಲವನ್ನು ತಡೆದು ಕೊಳ್ಳುವದಿಲ್ಲ. ಅದೂ ಕೂಡ ಪೂರ್ಣವಾಗಿಲ್ಲ. ಆದರೂ ಉಸ್ತುವಾರಿ ಸಚಿವರು ತರಾತುರಿಯಲ್ಲಿ ಉದ್ಘಾಟನೆಗೆ ಮುಂದಾಗಿರುವದು ರಾಜಕೀಯ ಪ್ರೇರಿತವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ತಮ್ಮದು ಯಾವದೇ ವಿರೋಧವಿಲ್ಲ. ಆದರೆ ಈ ರೀತಿಯ ಅಪೂರ್ಣ ಕಾಮಗಾರಿಗಳ ತರಾತುರಿಯ ಉದ್ಘಾಟನೆಯನ್ನು ವಿರೋಧಿಸುವದಾಗಿ ಹೇಳಿದ್ದಾರೆ.