ಸಿದ್ದಾಪುರ, ಮಾ. 24: ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕಾದ ಜಿಲ್ಲೆಯ ಎರಡು ರಾಷ್ಟ್ರೀಯ ಪಕ್ಷಗಳ ಸಚಿವರು ಹಾಗೂ ಶಾಸಕರು, ಜನಪ್ರತಿನಿಧಿಗಳು ಗುದ್ದಲಿ ಹಿಡಿದುಕೊಂಡು 50 ಮಂದಿ ಕಾರ್ಯಕರ್ತರನ್ನು ಸೇರಿಸಿಕೊಂಡು ಪೈಪೋಟಿಯಲ್ಲಿ ಭೂಮಿ ಪೂಜೆ ನೆರವೇರಿಸಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ವ್ಯಂಗ್ಯವಾಗಿ ಕುಟುಕಿದ್ದಾರೆ.
ಸಿದ್ದಾಪುರ ಪ್ರೆಸ್ಕ್ಲಬ್ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದಲ್ಲದೆ ರಿಬ್ಬನ್ ಹಾಗೂ ಕತ್ತರಿಯನ್ನು ಹಿಡಿದುಕೊಂಡು ಜಿಲ್ಲೆಯಾದ್ಯಂತ ಉದ್ಘಾಟನಾ ಕಾರ್ಯಕ್ರಮದ ಗುಂಗಿನಲ್ಲಿ ಕಾಲಹರಣ ಮಾಡುತ್ತಿರುವದು ಖಂಡನೀಯ ಎಂದು ಹೇಳಿದ್ದಾರೆ.
ಜೆಡಿಎಸ್ ಪಕ್ಷದ ಮುಖಂಡ ಎಂ.ಸಿ ನಾಣಯ್ಯ ಅವರು ಕಾಂಗ್ರಸ್ ಪಕ್ಷ ಸೇರ್ಪಡೆಗೊಳ್ಳುತ್ತಿರುವದರಿಂದ ಜೆಡಿಎಸ್ ಪಕ್ಷಕ್ಕೆ ಯಾವದೇ ನಷ್ಟ ಇಲ್ಲವೆಂದು ಸಂಕೇತ್ ಪೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ನಾಣಯ್ಯ ಅವರು, ಜೆಡಿಎಸ್ ಪಕ್ಷದಿಂದ ಸಾಕಷ್ಟು ಲಾಭವನ್ನು ಪಡೆದುಕೊಂಡು ಇದೀಗ ತನಗೆ ನೋವಾಗಿದೆ ಎಂದು ನೆಪವೊಡ್ಡಿ ಆರೋಪ ಮಾಡುತ್ತಿರುವದು ಹಾಸ್ಯಾಸ್ಪದವಾಗಿದೆ. ಅವರು ಪಕ್ಷದಲ್ಲಿದ್ದು, ಉನ್ನತ ಸ್ಥಾನದಲ್ಲಿದ್ದಾಗಲೂ ಪಕ್ಷಕ್ಕೆ ಏನೂ ಕೊಡುಗೆ ನೀಡಿಲ್ಲ. ಎರಡನೇ ಹಂತದ ನಾಯಕರನ್ನೂ ಬೆಳೆಸಿಲ್ಲ. ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.
ಇತ್ತೀಚಿಗೆ ನಾಗರಹೊಳೆ ಸಮೀಪದ ಅರಣ್ಯ ಪ್ರದೇಶದಲ್ಲಿ ಕರ್ತವ್ಯ ನಿರತ ಸಂದರ್ಭದಲ್ಲಿ ಅರಣ್ಯಾಧಿಕಾರಿ ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟ ಘಟನೆ ವಿಷಾದÀನೀಯ. ಆದÀರೆ ಸರಕಾರ ಕಾಡಾನೆ ತುಳಿದು ಸಾವನ್ನಪ್ಪಿರುವ ಕುಟುಂಬಕ್ಕೆ ರೂ 50 ಲಕ್ಷ ಹಾಗೂ ಅವರ ಪತ್ನಿಗೆ ಎಸಿ ಹುದ್ದೆ ನೀಡಿರುವ ಕ್ರಮ ಸಮಂಜಸವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ 42 ಮಂದಿ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದು, ಇವರ ಕುಟುಂಬಕ್ಕೆ ರೂ. 25 ಲಕ್ಷ ಪರಿಹಾರ ನೀಡಬೇಕು ಹಾಗೂ ಕುಟುಂಬದ ಓರ್ವ ಸದಸ್ಯನಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು. ಸರಕಾರ ಈ ರೀತಿ ತಾರತಮ್ಯ ಮಾಡಿರುವದು ಸರಿಯಾದ ಕ್ರಮವಲ್ಲ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎನ್ ವಾಸು, ಉಪಾಧ್ಯಕ್ಷ ಎಸ್.ಎಂ ಮುಬಾರಕ್, ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್, ಸಹ ಕಾರ್ಯದರ್ಶಿ ಎ.ಎಸ್ ಮುಸ್ತಫ, ಖಜಾಂಜಿ ಸುಬ್ರಮಣಿ ಇದ್ದರು.