ಮಡಿಕೇರಿ, ಮಾ. 25: ಕೊಡಗು ಜಿಲ್ಲಾ ವ್ಯಾಪ್ತಿಯ ಮೂಲಭೂತ ಸಮಸ್ಯೆಗಳಿಗೆ ಜನರಿಂದಲೇ ಸೂಕ್ತ ಸಲಹೆ, ಸೂಚನೆಗಳನ್ನು ಪಡೆದು ಜಿಲ್ಲೆಗೆ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲು ಜೆಡಿಎಸ್ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಜಿಲ್ಲಾ ಜೆಡಿಎಸ್ ಮುಂದಾಗಿರುವದಾಗಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ. ಯಾಲದಾಳು ಮನೋಜ್ ಬೋಪಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವದೇ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಆಲಿಸಿ ಪ್ರಣಾಳಿಕೆಯನ್ನು ರೂಪಿಸುತ್ತಿಲ್ಲ. ಆದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಇದೇ ಪ್ರಥಮ ಬಾರಿಗೆ ಆಯಾ ಜಿಲ್ಲೆಯ ಜನರಿಂದಲೇ ಸಲಹೆ ಪಡೆದು ಪ್ರತ್ಯೇಕ ಪ್ರಣಾಳಿಕೆ ತರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆ ಜಿಲ್ಲೆಯ ಜನತೆ ಸಮಸ್ಯೆಗಳು ಹಾಗೂ ಈಡೇರಬೇಕಾಗಿರುವ ಬೇಡಿಕೆಗಳ ಬಗ್ಗೆ ಜಿಲ್ಲಾ ಜೆಡಿಎಸ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಜೆಡಿಎಸ್ ಜಿಲ್ಲಾ ವಕ್ತಾರ ಪಿ.ಎಸ್. ಭರತ್ ಮಾತನಾಡಿ, ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಾಪನೆಗೆ ಇಲ್ಲಿನ ಶಾಸಕರು, ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳ ಗಂಭೀರ ಪ್ರಯತ್ನ ನಡೆಯುವದು ಅಗತ್ಯವೆಂದು ತಿಳಿಸಿದರು.
ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಮೊಹಮ್ಮದ್ ಅಬ್ರಾರ್, ಗಾಳಿಬೀಡು ಗ್ರಾಮಸ್ಥರಾದ ಶಿವಯ್ಯ ಹಾಗೂ ಪೂಣಚ್ಚ ಉಪಸ್ಥಿತರಿದ್ದರು.