ಮಡಿಕೇರಿ, ಮಾ. 25: ಅಂತರ್ಜಲವನ್ನು ಹೆಚ್ಚಿಸುವ ಮೂಲಕ ನದಿಗಳ ಪುನಶ್ಚೇತನಕ್ಕೆ ಕಾಯಕಲ್ಪ ನೀಡುವ ಕಾರ್ಯಕ್ರಮಕ್ಕೆ ತಾ. 27 ರಂದು ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿಶಂಕರ ಗುರೂಜಿ ಭಾಗಮಂಡಲದಲ್ಲಿ ಚಾಲನೆ ನೀಡಲಿದ್ದಾರೆ ಎಂದು ನದಿಗಳ ಪುನಶ್ಚೇತನ ಅಭಿಯಾನದ ಮುಖ್ಯಸ್ಥ ಗಂಗೊಳ್ಳಿ ನಾಗರಾಜು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವರ್ಷದ (ಮೊದಲ ಪುಟದಿಂದ) 12 ತಿಂಗಳು ಕೂಡಾ ತುಂಬಿ ಹರಿಯುತ್ತಿದ್ದ ರಾಜ್ಯದ ನದಿಗಳು ಇಂದು ಬರಡಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಅಂತರ್ಜಲವನ್ನು ಹೆಚ್ಚಿಸುವ ಮೂಲಕ ನದಿಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸರ್ಕಾರದ ಸಹಕಾರದೊಂದಿಗೆ ಆರ್ಟ್ ಆಫ್ ಲಿವಿಂಗ್, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮತ್ತು ವಿವಿಧ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯವ್ಯಾಪಿ ನದಿಗಳ ಪುನಶ್ಚೇತನಕ್ಕೆ ಮುಂದಾಗಿರುವದಾಗಿ ತಿಳಿಸಿದರು. ಬೀದರ್‍ನಿಂದ ಚಾಮರಾಜನಗರದವರೆಗೆ ಅಭಿಯಾನವನ್ನು ನಡೆಸಲಿದ್ದು, 2024ರ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ಕಾವೇರಿ, ಲಕ್ಷ್ಮಣ ತೀರ್ಥ ಸೇರಿದಂತೆ ಎಲ್ಲಾ ನದಿಗಳು ಹಾಗೂ ಉಪನದಿಗಳನ್ನು ಉಳಿಸುವ ಅಗತ್ಯವಿದ್ದು, ಮನೆ ಮನೆಗೆ ತೆರಳಿ ಜನ ಜಾಗೃತಿ ಮೂಡಿಸುವ ಕಾರ್ಯವನ್ನು ಅಭಿಯಾನದ ಸಂಯೋಜಕರು ಮಾಡಲಿದ್ದಾರೆ. ಪ್ರತಿ ಗ್ರಾಮ ಮಟ್ಟದಲ್ಲಿ ಸಂಯೋಜಕರನ್ನು ನೇಮಕ ಮಾಡಿ ಯೋಜನೆಯ ಕುರಿತು ತರಬೇತಿ ನೀಡಲಾಗುವದು. ಯೋಜನೆ ಜಾರಿಯಾಗುವದರೊಂದಿಗೆ ಉದ್ಯೋಗವೂ ಸೃಷ್ಟಿಯಾಗಲಿದ್ದು, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ವೇತನ ಪಾವತಿಯಾಗಲಿದೆ ಎಂದು ನಾಗರಾಜು ಮಾಹಿತಿ ನೀಡಿದರು.
ಗದಗ ಜಿಲ್ಲೆಯಲ್ಲಿ ಸುಮಾರು 12,600 ಸಂಯೋಜಕರಿಗೆ ತರಬೇತಿಯನ್ನು ನೀಡಿ ಯೋಜನೆಯನ್ನು ಯಶಸ್ವಿಗೊಳಿಸಲಾಗಿದೆ. ವಿಜ್ಞಾನಿಗಳ ಸಹಕಾರದೊಂದಿಗೆ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ವೈಜ್ಞಾನಿಕವಾಗಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗುವದು. ಮಳೆ ನೀರು ಹೆಚ್ಚಾಗಿ ಹರಿದು ಬರುವ ಪ್ರದೇಶಗಳಲ್ಲಿ ಸುಮಾರು 20 ಅಡಿಯಷ್ಟು ಆಳದ ಗುಂಡಿ ತೆಗೆದು ಮಳೆ ನೀರನ್ನು ಇಂಗಿಸುವ ಕಾರ್ಯಕ್ರಮವನ್ನು ವೈಜ್ಞಾನಿಕವಾಗಿ ಕಾರ್ಯಗತಗೊಳಿಸಲಾಗುವದು. ಗ್ರಾಮ ಗ್ರಾಮಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದ್ದು, ಅಕ್ಕಪಕ್ಕದ ಗ್ರಾಮಸ್ಥರು ಪರಸ್ಪರ ಒಗ್ಗೂಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಪ್ರೇರಣೆ ನೀಡಲಾಗುವದು ಎಂದು ತಿಳಿಸಿದರು.
ಈ ಯೋಜನೆ ಅನುಷ್ಠಾನಗೊಂಡ ಐದು ವರ್ಷಗಳಲ್ಲಿ ಕೊಡಗಿನ ಎಲ್ಲಾ ನದಿ, ಹಳ್ಳಕೊಳ್ಳಗಳು ಅಂತರ್ಜಲ ಮಟ್ಟದ ಏರಿಕೆಯಿಂದ ತುಂಬಿ ಹರಿಯಲು ಆರಂಭಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಮರಗಳ ಹನನ ಹಾಗೂ ತೋಟಗಳಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಹವಾಗುಣದಲ್ಲಿ ಏರುಪೇರಾಗುತ್ತಿದ್ದು, ಮಳೆಯ ಕೊರತೆ ಎದುರಾಗಿದೆ. ಅಲ್ಲದೆ ಅಂತರ್ಜಲದ ಮಟ್ಟ ಕುಸಿಯುತ್ತಿದೆ ಎಂದು ಅಭಿಪ್ರಾಯಪಟ್ಟ ನಾಗರಾಜು ಮಳೆಗೆ ಪೂರಕವಾದ ಮರಗಳನ್ನು ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿಯ ಪಡಿಸುವ ಬಗ್ಗೆಯೂ ಚಿಂತನೆ ಇದೆ ಎಂದರು.ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿವಿಧ ಸಂಘ, ಸಂಸ್ಥೆಗಳ ಸಹಕಾರವನ್ನು ಪಡೆದು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವದೆಂದು ಸ್ಪಷ್ಟಪಡಿಸಿದರು. ಮಂಗಳವಾರ ಪ್ರಾಯೋಗಿಕವಾಗಿ ಭಾಗಮಂಡಲ ಕ್ಷೇತ್ರದಲ್ಲಿ ನದಿ ಪುನಶ್ಚೇತನ ಅಭಿಯಾನಕ್ಕೆ ಚಾಲನೆ ನೀಡಲಾಗುವದು ಎಂದು ಹೇಳಿದರು.
ತಾ. 26 ರಂದು (ಇಂದು) ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಶ್ರೀರವಿಶಂಕರ್ ಗುರೂಜಿ ತಾ. 27 ರಂದು ಭಾಗಮಂಡಲದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಾಗರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಯೋಜಕರಾದ ಎ.ಪಿ. ರಾಜಪ್ಪ, ಶ್ರೀಕಾವೇರಿ ಸಂರಕ್ಷಣಾ ಸಮಿತಿಯ ಪ್ರಮುಖರಾದ ಗಂಗಾಚಂಗಪ್ಪ, ಇಮ್ಮಿಉತ್ತಪ್ಪ, ಕೆ.ಡಬ್ಲ್ಯು. ಬೋಪಯ್ಯ ಹಾಗೂ ಭವಾನಿ ನಾಣಯ್ಯ ಉಪಸ್ಥಿತರಿದ್ದರು.