ಮಡಿಕೇರಿ, ಮಾ. 25: ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಸ್ಮರಣೆ, ಪ್ರಾರ್ಥನೆ, ಭಜನೆ, ವಿಶೇಷ ಪೂಜಾದಿಗಳೊಂದಿಗೆ ಇಂದು ನಾಡಿನೆಲ್ಲೆಡೆ ಶ್ರದ್ಧಾಭಕ್ತಿಯಿಂದ ಆತನಿಗೆ ನಮನ ಸಲ್ಲಿಸಲಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಯ ವಿವಿಧೆಡೆ ರಾಮನ ಸ್ಮರಣೆಗೈದರೆ, ಶ್ರೀ ಕೋದಂಡರಾಮ ದೇವಾಲಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ, ಪೂಜೆ, ನಗರ ಸಂಕೀರ್ತನೆ ನೆರವೇರಿತು.ಈಗಾಗಲೇ ಜೀರ್ಣೋದ್ಧಾರಗೊಳ್ಳುತ್ತಿರುವ ಮಲ್ಲಿಕಾರ್ಜುನ ನಗರದ
(ಮೊದಲ ಪುಟದಿಂದ) ಶ್ರೀ ಕೋದಂಡರಾಮ ಸನ್ನಿಧಿಯ ಬಾಲಾಲಯದಲ್ಲಿ ಪ್ರತಿಷ್ಠಾಪಿತ ರಾಮ ಪರಿವಾರ, ಬಲಮುರಿ ಗಣಪತಿ, ನವಗ್ರಹ ದೇವರುಗಳಿಗೆ ವಿಶೇಷ ಪೂಜೆ ನಡೆಯಿತು. ಈ ಪ್ರಯುಕ್ತ ಸನ್ನಿಧಿಯಲ್ಲಿ ಗಣಹೋಮ, ಉತ್ಸವ ಮೂರ್ತಿಯೊಂದಿಗೆ ಅಲಂಕೃತ ಮಂಟಪ, ಚಂಡೆ ಸಹಿತ ಮೆರವಣಿಗೆ ಮೂಲಕ ಭಜನೆ ನಡೆಸಲಾಯಿತು.ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ಸನ್ನಿಧಿಯಿಂದ ಬನ್ನಿ ಮಂಟಪ, ಮಹದೇವಪೇಟೆ, ಖಾಸಗಿ ಬಸ್ ನಿಲ್ದಾಣ, ಗಣಪತಿ ಬೀದಿಗಾಗಿ ಸಾಗಿದ ಭಜನೆ ಸಹಿತ ಮೆರವಣಿಗೆ ಮರಳಿ ಸನ್ನಿಧಿಯಲ್ಲಿ ಸಮಾಪ್ತಿಗೊಂಡಿತು. ವಿಶೇಷವಾಗಿ ಮಲ್ಲಿಕಾರ್ಜುನ ನಗರ ಹಾಗೂ ಸುತ್ತಮುತ್ತಲಿನ ಮಹಿಳೆಯರು, ಮಕ್ಕಳ ಸಹಿತ ಸದ್ಭಕ್ತರು ಭಜನೆಯಲ್ಲಿ ಪಾಲ್ಗೊಂಡಿದ್ದರು. ಯುವಕರು, ಬಾಲಕ, ಬಾಲಕಿಯರ ಸಹಿತ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಹಾಪೂಜೆ ಬಳಿಕ ಸದ್ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಈ ಪ್ರಯುಕ್ತ ವಿಶೇಷ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
ಪೇಟೆ ರಾಮಮಂದಿರ : ಮಡಿಕೇರಿಯ ಪೇಟೆ ಶ್ರೀ ರಾಮ ಮಂದಿರದಲ್ಲಿ ಇಂದು, ಶ್ರೀರಾಮ ನವಮಿ ಪ್ರಯುಕ್ತ ವಿಶೇಷ ಅಲಂಕಾರ ಪೂಜೆಯೊಂದಿಗೆ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ಜರುಗಿತು. ಸಂಜೆಯೂ ಭಜನೆ, ಪ್ರಸಾದ, ಮಹಾಪೂಜೆ ನೆರವೇರಿತು. ಹೆಚ್ಚಿನ ಭಕ್ತರು ಪಾಲ್ಗೊಂಡಿದ್ದರು.
ಶ್ರೀ ಆಂಜನೇಯ ಗುಡಿ: ಶ್ರೀ ಓಂಕಾರೇಶ್ವರ ದೇವಾಲಯ ವತಿಯಿಂದ ಶ್ರೀ ಆಂಜನೇಯ ಗುಡಿಯಲ್ಲಿ ರಾಮೋತ್ಸವ ಪ್ರಯುಕ್ತ ರಾಮತಾರಕ ಹೋಮ, ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಿತು. ಓಂಕಾರ ಸದನದಲ್ಲಿಯೂ ಶ್ರೀ ರಾಮೋತ್ಸವ ಸಮಿತಿ ವತಿಯಿಂದ ವಿಶೇಷ ಪೂಜಾದಿಗಳೊಂದಿಗೆ ಸ್ತೋತ್ರಪಠನ, ಧಾರ್ಮಿಕ ಕಾರ್ಯಕ್ರಮಗಳು, ಪ್ರಸಾದ ವಿನಿಯೋಗ ಜರುಗಿತು.
ಶ್ರೀ ಚೌಡೇಶ್ವರಿ ಸನ್ನಿಧಿ: ಮಡಿಕೇರಿಯ ಮಹದೇವಪೇಟೆ ಶ್ರೀ ಚೌಡೇಶ್ವರಿ ಸನ್ನಿಧಿಯಲ್ಲಿಯೂ ರಾಮ ನವಮಿ ಪ್ರಯುಕ್ತ ಏಕಾಂತ ರಾಮನಿಗೆ ವಿಶೇಷ ಪೂಜೆಯೊಂದಿಗೆ ಸದ್ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ವಿವಿಧೆಡೆ: ದೇಚೂರು ಶ್ರೀ ರಾಮ ಮಂದಿರ, ಶ್ರೀ ಕನ್ನಿಕಾಪರಮೇಶ್ವರಿ, ಮೂರ್ನಾಡುವಿನ ಶ್ರೀರಾಮ ಮಂದಿರ, ಕಂಬಿಬಾಣೆ ರಾಮ ಮಂದಿರ, ಸುಂಟಿಕೊಪ್ಪ ಶ್ರೀ ರಾಮ ದೇಗುಲ, ನಾಪೋಕ್ಲು ಶ್ರೀರಾಮ ಮಂದಿರ, ಭಾಗಮಂಡಲ ದೇವ ಸನ್ನಿಧಿ ಹಾಗೂ ರಾಮ ಮಂದಿರ, ವೀರಾಜಪೇಟೆ ಆಂಜನೇಯ ದೇಗುಲ, ಕುಶಾಲನಗರ ಆಂಜನೇಯ ಸನ್ನಿಧಿಗಳಲ್ಲಿಯೂ ರಾಮೋತ್ಸವ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
ಸೋಮವಾರಪೇಟೆಯಲ್ಲಿ 9 ರಥಗಳ ಶೋಭಾಯಾತ್ರೆ
ಸೋಮವಾರಪೇಟೆ : ಶ್ರೀ ರಾಮನವಮಿ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀರಾಮ ನವಮಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಉತ್ಸವಕ್ಕೆ ಕೇಸರಿಮಯವಾಗಿ ಸಿಂಗಾರಗೊಂಡಿದ್ದ ಪಟ್ಟಣದಲ್ಲಿ ಸಂಜೆ ಶ್ರೀರಾಮನ ಮೂರ್ತಿಯನ್ನು ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು, ರಾಮ ಭಕ್ತರು ಭಾಗವಹಿಸಿದ್ದರು.
ಇಲ್ಲಿನ ಶ್ರೀ ಆಂಜನೇಯ ದೇವಾಲಯ ಆವರಣದಿಂದ ಹೊರಟ ಮೆರವಣಿಗೆಗೆ ಜಾನಪದ ಕಲಾತಂಡಗಳೊಂದಿಗೆ, ಡೊಳ್ಳು ಕುಣಿತ, ತೋಳೂರುಶೆಟ್ಟಳ್ಳಿಯ ಸುಗ್ಗಿ ಕುಣಿತ, ಪೂಜಾ ಕುಣಿತ, ವೀರಗಾಸೆ, ಚಂಡೆ ಮತ್ತು ಜಾಗಟೆ ವಾದ್ಯಗಳು ಹೆಚ್ಚಿನ ಮೆರುಗು ನೀಡಿದವು.
ಸೋಮವಾರಪೇಟೆ ನಗರ, ರೇಂಜರ್ ಬ್ಲಾಕ್, ಬಜೆಗುಂಡಿ, ಯಡೂರು, ಶಾಂತಳ್ಳಿ, ಗೌಡಸಮಾಜ ರಸ್ತೆ, ಆಲೇಕಟ್ಟೆ ರಸ್ತೆ, ಹಾನಗಲ್ಲು, ಕಾನ್ವೆಂಟ್ ಬಾಣೆಗಳಿಂದ ಆಗಮಿಸಿದ ಶ್ರೀರಾಮನ ರಥಗಳಿಗೆ ಭಕ್ತಾದಿಗಳು ಪೂಜೆ ಸಲ್ಲಿಸಿದರು.
ಉತ್ಸವ ಸಮಿತಿ ಅಧ್ಯಕ್ಷ ಸುಭಾಶ್ ತಿಮ್ಮಯ್ಯ, ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ರಮೇಶ್, ಸಂಚಾಲಕ ದರ್ಶನ್, ಎಂ.ಬಿ. ಉಮೇಶ್, ಕರ್ಕಳ್ಳಿ ರವಿ ಸೇರಿದಂತೆ ಇತರರು ಉತ್ಸವದ ಉಸ್ತುವಾರಿ ವಹಿಸಿದ್ದರು.
ಇದಕ್ಕೂ ಮುನ್ನ ಆಂಜನೇಯ ದೇವಾಲಯ ಆವರಣದಲ್ಲಿ ನಡೆದ ಜಾಗೃತಿ ಸಭೆಯ ಅಧ್ಯಕ್ಷತೆಯನ್ನು ಶ್ರೀರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ಸುಭಾಶ್ ತಿಮ್ಮಯ್ಯ ವಹಿಸಿದ್ದರು. ಆಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ. ಗೋಪಾಲ್, ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಂ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರಾಮನವಮಿ ಅಂಗವಾಗಿ ಆಂಜನೇಯ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು ನೆರವೇರಿದವು. ದೇವಾಲಯ ಸಮಿತಿ ಪದಾಧಿಕಾರಿಗಳಾದ ಕುಮಾರ್, ಸಿ.ಸಿ. ನಂದ, ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಶ್ರೀರಾಮಾಂಜನೇಯ ಉತ್ಸವ ಸಮಿತಿ ವತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಉತ್ಸವ ಆಚರಿಸಲಾಯಿತು. ಬೆಳಿಗ್ಗೆ ಶ್ರೀ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ನಂತರ ಸಂಜೆಯವರೆಗೂ ಸಾರ್ವಜನಿಕರಿಗೆ ಪಾನಕ ವಿತರಿಸಲಾಯಿತು. ಸಮಿತಿಯ ಅಧ್ಯಕ್ಷ ಸಿ.ಎನ್.ಸುಜಿತ್‍ಕುಮಾರ್, ಪದಾಧಿಕಾರಿಗಳಾದ ಪ್ರಸನ್ನ ನಾಯರ್, ಸಂಪತ್, ಶರತ್, ನಿತಿನ್, ದಿನೇಶ್, ಸಾಗರ್, ಸತೀಶ್, ಸುರೇಶ್,ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಡಿವೈಎಸ್‍ಪಿ ಶ್ರೀನಿವಾಸಮೂರ್ತಿ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಣ್ಣ ಅವರುಗಳೊಂದಿಗೆ 10 ಮಂದಿ ಠಾಣಾಧಿಕಾರಿಗಳು, 4 ವೃತ್ತ ನಿರೀಕ್ಷಕರು, 35 ಸಹಾಯಕ ಠಾಣಾಧಿಕಾರಿಗಳು, 250 ಮಂದಿ ಸಿಬ್ಬಂದಿಗಳೊಂದಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಶನಿವಾರಸಂತೆ: ಪಟ್ಟಣದ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನವಮಿಯನ್ನು ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಿಗ್ಗೆ ಮಹಾಗಣಪತಿ, ನವಗ್ರಹಪೂಜಾ ಪೂರ್ವಕ ಸೀತಾ, ಲಕ್ಷ್ಮಣ, ಆಂಜನೇಯ ಸಹಿತ ಶ್ರೀರಾಮನಿಗೆ ಫಲಪಂಚಾಮೃತ ಅಭಿಷೇಕ, ಪುರುಷ ಸೂಕ್ತ, ನಾರಾಯಣ ಸೂಕ್ತ, ಶ್ರೀಸೂಕ್ತ, ಜಲಾಭಿಷೇಕ, ಅಲಂಕಾರ ಸೇವೆ ನಡೆಯಿತು. ಬಳಿಕ ಮಹಾಗಣಪತಿ, ನವಗ್ರಹ ಹೋಮ, ಆಂಜನೇಯ ಸ್ವಾಮಿಗೆ ಫಲಹೋಮ, ರಾಮನಿಗೆ ಶ್ರೀರಾಮತಾರಕ ಹೋಮ ನಡೆದವು. ಮಧ್ಯಾಹ್ನ ಪೂರ್ಣಾಹುತಿ, ಮಹಾಮಂಗಳಾರತಿಯಾಗಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅರ್ಚಕರಾದ ನಾಗೇಶ್ ಭಟ್, ಸುದರ್ಶನ್, ಶಂಕರನಾರಾಯಣ ಭಟ್, ರವಿಭಟ್, ಎನ್.ಕೆ. ನಾಗೇಶ್, ಮೋಹನ್ ಕುಮಾರ್, ರಾಮಸ್ವಾಮಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
ಸಂಜೆ ಸೀತಾ, ಲಕ್ಷ್ಮಣ, ಆಂಜನೇಯ ಸಹಿತ ಶ್ರೀರಾಮ ದೇವರ ಮೂರ್ತಿಗಳನ್ನು ಅಲಂಕೃತ ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಎಡೆಯೂರಿನ ವೀರಭದ್ರ ಸ್ವಾಮಿ ಜಾನಪದ ಕಲಾ ತಂಡದ ವತಿಯಿಂದ ವೀರಗಾಸೆ ಮತ್ತು ವಾದ್ಯ ಮೆರವಣಿಗೆಯಲ್ಲಿ ಪ್ರದರ್ಶಿತವಾಯಿತು.