ಮಡಿಕೇರಿ, ಮಾ. 25: ಕೊಡಗಿನ ವೀರ ಸೇನಾನಿಗಳಲ್ಲಿ ಓರ್ವರಾಗಿರುವ ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಸ್ಮಾರಕ ಭವನದ ಅಭಿವೃದ್ಧಿ ಕಾಮಗಾರಿ ಚುರುಕುಗೊಂಡಿದ್ದು, ತಾ. 31 ರಂದು ಜನರಲ್ ಕೆ.ಎಸ್. ತಿಮ್ಮಯ್ಯ ಅವರ 112ನೇ ಜನ್ಮೋತ್ಸವ ಸಂದರ್ಭ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ. ನಗರದ ಹೆದ್ದಾರಿಗೆ ಹೊಂದಿಕೊಂಡಂತೆ ಈ ಸೇನಾನಿಯ ನಿವಾಸ (ಸನ್ನಿಸೈಡ್) ಈಗಾಗಲೇ ಸಂಪೂರ್ಣ ನವೀಕರಣಗೊಳ್ಳುತ್ತಿದೆ.
ಈ ನಿವಾಸದೊಳಗೆ ಭಾರತ ಸೇನೆಯೊಂದಿಗೆ ದೇಶ - ವಿದೇಶಗಳಲ್ಲಿ ತಮ್ಮ ಜೀವಿತಾವಧಿಯಲ್ಲಿ ಜ|| ತಿಮ್ಮಯ್ಯ ಸಲ್ಲಿಸಿರುವ ಸೇವೆ ಹಾಗೂ ಸಾಧನೆಯ ಯಶೋಗಾಥೆಯೊಂದಿಗೆ, ಸೇನೆಯ ರಣಾಂಗಣದಲ್ಲಿ ಮೆರೆದ ಶೌರ್ಯವನ್ನು ಕೂಡ ಚಿತ್ರಿಸುವ ಪ್ರಯತ್ನ ಸಾಗಿದೆ. ಈಗಾಗಲೇ ಕೇರಳ ಮೂಲದ ಬೆಂಗಳೂರಿನ ಕಲಾವಿದ ರತ್ನಾಕರನ್ ನೇತೃತ್ವದಲ್ಲಿ ನಾಲ್ವರ ತಂಡ ಸ್ಮಾರಕ ಭವನದಲ್ಲಿ ಚಿತ್ರಪಟಗಳ ನಿರ್ಮಾಣದಲ್ಲಿ ತೊಡಗಿದ್ದಾರೆ.
ಅಲ್ಲದೆ, ನಿವಾಸದ ಹೊರಾಂಗಣದಲ್ಲಿ ಭಾರತ ಸೇನೆಯ 1970ರ ಸಾಲಿನ ಯುದ್ಧ ಟ್ಯಾಂಕರ್ ಸ್ಥಾಪಿಸಲಾಗುತ್ತಿದ್ದು, ಪಕ್ಕದಲ್ಲಿ ಇತರ ಇತಿಹಾಸದ ಕುರುಹುಗಳನ್ನು ರೂಪಿಸಲಾಗುತ್ತಿದೆ. ಇನ್ನೊಂದೆಡೆ ಅಪೂರ್ವ ಯುದ್ಧ ಸ್ಮಾರಕವನ್ನು ರೂಪಿಸುವದರೊಂದಿಗೆ, ವೀಕ್ಷಕರ ಗಮನ ಸೆಳೆಯುವ ಸಂದೇಶವನ್ನು ಕೂಡ ಬರೆದಿರುವದು ಗೋಚರಿಸಿದೆ. ಜನರಲ್ ತಿಮ್ಮಯ್ಯ ಸ್ಮಾರಕ ಭವನ ಹಾಗೂ ವಸ್ತು ಸಂಗ್ರಹಾಲಯದ ಕೆಲಸ ಬಿರುಸಿನಿಂದ ಮುಂದುವರೆದಿದೆ.
ಪೂರ್ವಭಾವಿ ಸಭೆ
ತಾ. 31 ರಂದು ಜನರಲ್ ಕೆ.ಎಸ್.ತಿಮ್ಮಯ್ಯ ಅವರ 112ನೇ ಜನ್ಮ ದಿನಾಚರಣೆ ಆಯೋಜಿಸುವದು ಹಾಗೂ ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ಮಾಣ ಕಾಮಗಾರಿಗಳ ಪ್ರಗತಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
(ಮೊದಲ ಪುಟದಿಂದ) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಏರ್ ಮಾರ್ಷಲ್.ಕೆ.ಸಿ.ಕಾರ್ಯಪ್ಪ, ಮೇಜರ್ ಬಿ.ಎ.ನಂಜಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಮೊಮ್ಮಗ ಬೆಳ್ಯಪ್ಪ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಫೋರಂ ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.
ಮೇಜರ್ ಬಿ.ಎ.ನಂಜಪ್ಪ ಈ ವೇಳೆ ಮಾತನಾಡಿ ಜನರಲ್ ತಿಮ್ಮಯ್ಯ ಅವರ ಹುಟ್ಟುಹಬ್ಬಕ್ಕೆ ವೈಸ್ ಅಡ್ಮಿರಲ್ ಕೆ.ಆರ್.ಕಾರ್ವೆ ಆಗಮಿಸಲಿದ್ದು, ತಾ. 31 ರಂದು ಬೆಳಿಗ್ಗೆ 9.30 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಸೇನಾ ಗೌರವದೊಂದಿಗೆ ಯುದ್ಧ ಸ್ಮಾರಕ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸೇನಾ ಮಿಲಿಟರಿ ಬ್ಯಾಂಡ್ ತಂಡದಿಂದ ಕಾರ್ಯಕ್ರಮದ, ಬಳಿಕ ಜನ್ಮ ದಿನಾಚರಣೆ ಸಭಾ ಕಾರ್ಯಕ್ರಮ ಜರುಗಲಿದೆ. ಆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಿಂದ ಭಾಷಣ, ನಂತರ ಕೊಡವ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.
ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಅವರು ಮಾತನಾಡಿ ಜನರಲ್ ತಿಮ್ಮಯ್ಯ ಹುಟ್ಟುಹಬ್ಬದ ಪ್ರಯುಕ್ತ ಯುದ್ಧ ಸ್ಮಾರಕ, ಯುದ್ಧ ಟ್ಯಾಂಕ್ ಸಿದ್ಧತೆಗೊಳ್ಳಬೇಕು. ಹಾಗೆಯೇ ಹೆಲಿಪ್ಯಾಡ್‍ಗೆ ಜಾಗ ಕಾಯ್ದಿರಿಸಿ, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಅವರು ಸಲಹೆ ಮಾಡಿದರು.
ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಒಳಾಂಗಣದಲ್ಲಿ ವಿವಿಧ ಸಿದ್ಧತೆಗಳನ್ನು ಕೈಗೊಳ್ಳುತ್ತಿರುವ ಬ್ಲಾಕ್ ಪೇಬಲ್ ಸಂಸ್ಥೆಯ ಸುಭಾಷ್ ಜನರಲ್ ತಿಮ್ಮಯ್ಯ ಸ್ಮಾರಕ ಒಳಾಂಗಣದಲ್ಲಿ ಜನರಲ್ ತಿಮ್ಮಯ್ಯ ಅವರ ಜೀವನ ಚರಿತ್ರೆ ಹಾಗೂ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಗ್ಗೆ ಪವರ್ ಪಾಯಿಂಟ್ ಮೂಲಕ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಜನರಲ್ ತಿಮ್ಮಯ್ಯ ಹುಟ್ಟುಹಬ್ಬವನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ಆಯೋಜಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನಿರ್ದೇಶನ ನೀಡಿದರು.
ಯುದ್ಧ ಸ್ಮಾರಕ, ಯುದ್ಧ ಟ್ಯಾಂಕ್ ಸಿದ್ಧಗೊಳಿಸುವದು ಮತ್ತಿತರ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಜನರಲ್ ತಿಮ್ಮಯ್ಯನವರ ಮೊಮ್ಮಗ ಬೆಳ್ಯಪ್ಪ ಅವರು ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಮ್ಮ ಕುಟುಂಬದವರು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದರು.
ನಿರ್ಮಿತಿ ಕೆಂದ್ರದ ಯೋಜನಾ ನಿರ್ದೇಶಕ ಸಚಿನ್ ಮಾತನಾಡಿ 2-3 ದಿನದಲ್ಲಿ ಯುದ್ಧ ಸ್ಮಾರಕ ಕಾಮಗಾರಿ ಹಾಗೂ ಯುದ್ಧ ಟ್ಯಾಂಕ್‍ಗೆ ಬಣ್ಣ ಬಳಿದು ಸಿದ್ಧತೆ ಮಾಡುವದು ಸೇರಿದಂತೆ ಹಲವು ಕಾರ್ಯಗಳನ್ನು ಪೂರ್ಣಗೊಳಿಸಲಾಗುವದು ಎಂದು ಮಾಹಿತಿ ನೀಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಹಲವು ಮಾಹಿತಿ ನೀಡಿದರು. ಫೋರಂ ಸದಸ್ಯರಾದ ನಂದೇಟಿರ ರಾಜ, ನವೀನ್, ಮಣಜೂರು ಮಂಜುನಾಥ್ ಇತರರು ಇದ್ದರು.