ಮಡಿಕೇರಿ, ಮಾ. 26: ದಕ್ಷಿಣ ಗಂಗೆ ಹಾಗೂ ಜೀವನದಿ ಖ್ಯಾತಿಯ ಕೊಡಗಿನ ಕುಲಮಾತೆ ಕಾವೇರಿ ಒಡಲು ಮಲೀನಗೊಳ್ಳುತ್ತಿರುವ ದಿಸೆಯಲ್ಲಿ ‘ಯುವ ಬ್ರಿಗೇಡ್’ ವತಿಯಿಂದ ಏಪ್ರಿಲ್ 8 ರಿಂದ 15ರ ತನಕ ‘ಸ್ವಚ್ಛ ಕಾವೇರಿ’ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವದು ಎಂದು ಸಂಘಟನೆ ಪ್ರಮುಖ ಹಾಗೂ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.ಈ ಸಂಬಂಧ ಇಂದು ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಹಾಗೂ ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ಸಂಕಲ್ಪ ಕೈಗೊಳ್ಳುವದರೊಂದಿಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಜೀವನದಿ ಕಾವೇರಿಯ ಸಂರಕ್ಷಣೆ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ಗಂಡಾಂತರ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.ಕೊಡಗಿನಂತಹ ಪ್ರಕೃತಿ ರಮಣೀಯ ಜಿಲ್ಲೆಯಲ್ಲಿ ಇಂದು ಕೃಷಿ ಕುಂಠಿತಗೊಂಡು ಕಾಡು ನಾಶಗೊಳ್ಳುತ್ತಿರುವ ಪರಿಣಾಮ ಕಾವೇರಿ ಒಡಲು ಬತ್ತುವದರೊಂದಿಗೆ ಅಂತರ್ಜಲ ಕುಸಿಯುತ್ತಿರುವ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ದಿಸೆಯಲ್ಲಿ ಯುವ ಬ್ರಿಗೇಡ್‍ನ ಸುಮಾರು 120 ಯುವಕರ ತಂಡ ರಾಜ್ಯದೆಲ್ಲೆಡೆಯಿಂದ
(ಮೊದಲ ಪುಟದಿಂದ) ಕೊಡಗು ಜಿಲ್ಲೆಗೆ ಬರಲಿದ್ದಾರೆ. ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಕಾಲೇಜು ವಿದ್ಯಾರ್ಥಿಗಳ ಸಹಕಾರ ಪಡೆದು ತಲಕಾವೇರಿಯಿಂದ ಜಿಲ್ಲೆಯ ಗಡಿ ಶಿರಂಗಾಲ ತನಕ ಎಲ್ಲೆಲ್ಲಿ ಮಲಿನಗೊಂಡಿದೆಯೋ ಅಂತಹ ಪ್ರಮುಖ ಕಡೆಗಳಲ್ಲಿ ನಿತ್ಯವೂ ಸರಾಸರಿ 6 ಗಂಟೆಗಳ ಸಮಯ ಶ್ರಮದಾನದೊಂದಿಗೆ ಸ್ವಚ್ಛತೆ ಕೈಗೊಳ್ಳಲಿರುವದಾಗಿ ವಿವರಿಸಿದರು.
ಜಾಗೃತಿ ಜಾಥಾ: ಈ ಸಂದರ್ಭ ರಾಜಕೀಯ ಮತ್ತು ಮತ, ಧರ್ಮಗಳನ್ನು ಮೀರಿದಂತೆ ಸಮಾಜದ ಎಲ್ಲರೂ ಕಾವೇರಿಯ ಸ್ವಚ್ಛತೆ ಕಾಪಾಡಲು ಕೈಜೋಡಿಸಬೇಕೆಂಬ ಅಪೇಕ್ಷೆ ಯುವ ಬ್ರಿಗೇಡ್‍ದ್ದಾಗಿದೆ ಎಂದು ತಿಳಿಸಿದ ಸೂಲಿಬೆಲೆ, ಅಲ್ಲಲ್ಲಿ ಪಾದಯಾತ್ರೆ ಮುಖಾಂತರವೂ ಜನರಲ್ಲಿ ತಿಳುವಳಿಕೆ ಮೂಡಿಸಲಾಗುವದು ಎಂದರು. ನದಿ ಸಂರಕ್ಷಣೆಯ ಅವಶ್ಯಕತೆ ಹಾಗೂ ಮಲಿನಗೊಳಿಸದಂತೆ ಕಾವೇರಿ ತಟದ ಅಲ್ಲಲ್ಲಿ ಸಭೆಗಳನ್ನು ನಡೆಸಲಾಗುವದು ಎಂದು ಮಾಹಿತಿ ನೀಡಿದರು.
ಖುದ್ದು ಭೇಟಿ: ಈ ಸಂಬಂಧ ಇಂದು ತಲಕಾವೇರಿ-ಭಾಗಮಂಡಲ ಸೇರಿದಂತೆ ಪಾಲೂರು, ನಾಪೋಕ್ಲು, ಕೊಂಡಂಗೇರಿ, ಸಿದ್ದಾಪುರ, ನೆಲ್ಲಿಹುದಿಕೇರಿ, ನಂಜರಾಯಪಟ್ಟಣ, ಕುಶಾಲನಗರ ಮುಂತಾದೆಡೆಗಳಿಗೆ ಅವರು ಖುದ್ದು ಭೇಟಿ ನೀಡಿ ಕಾವೇರಿ ಒಡಲು ಮಲಿನಗೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕೆಲವೆಡೆ ನದಿಯ ಹರಿಯುವಿಕೆ ಕ್ಷೀಣಗೊಂಡಿರುವ ಬಗ್ಗೆಯೂ ಕಳವಳದೊಂದಿಗೆ ಅಲ್ಲಿನ ನಿವಾಸಿಗಳೊಡನೆ ಸಮಾಲೋಚನೆ ನಡೆಸಿದರು.
ಕೊಡಗಿನ ಜನತೆ ಜಾತಿ, ಮತಗಳನ್ನು ಮರೆತು ಕಾವೇರಿಯ ಸಂರಕ್ಷಣೆಯೊಂದಿಗೆ, ಸ್ವಚ್ಛತೆಯತ್ತ ನಿತ್ಯ ಗಮನ ಹರಿಸಬೇಕಿದ್ದು, ಯುವ ಬ್ರಿಗೇಡ್ ಆರಂಭಿಸಲಿರುವ ಆಂದೋಲನದಲ್ಲಿ ಪ್ರತ್ಯಕ್ಷ ತೊಡಗಿಸಿಕೊಳ್ಳಬೇಕೆಂಬ ಆಶಯ ಹೊಂದಿರುವದಾಗಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು. ಮುಂದಿನ ಸೆಪ್ಟೆಂಬರ್ ವೇಳೆಗೆ ಮತ್ತೊಮ್ಮೆ ಕಾವೇರಿ ನದಿ ಪಾತ್ರಗಳಲ್ಲಿ ಬಿದಿರು ಮೊಳೆಗಳನ್ನು ನೆಟ್ಟು ಪ್ರಕೃತಿ ಉಳಿವಿಗಾಗಿ ಅರಿವು ಮೂಡಿಸುವ ಯೋಜನೆ ಇದೆ ಎಂದು ಅವರು ಮಾಹಿತಿಯಿತ್ತರು.