ಅದು ಹೆಸರಿಗೆ ಮಾತ್ರ ನಮ್ಮ ಕಾವೇರಿ... ರೈತರ ಪಾಲಿಗೆ ಜೀವನದಿ... ಭಕ್ತರ ಪಾಲಿನ ಆರಾಧ್ಯ ದೈವ.... ಇತಿಹಾಸ, ಪುರಾಣ, ವೇದಗಳಲ್ಲಿ ಹೆಸರು ಪಡೆದ ಪುಣ್ಯ ನದಿ.. ಆದರೆ ಕೊಳಕು ಮನಸುಗಳ ಪಾಲಿಗೆ ಕಸದ ತೊಟ್ಟಿ... ಹೌದು ಕುಶಾಲನಗರ ಸಮೀಪದ ಕೊಪ್ಪ ಗೇಟ್ ಬಳಿ, ಸೇತುವೆ ಕೆಳಬದಿಯಲ್ಲಿ ನಮ್ಮ ಕಾವೇರಿ ನದಿಯ ದುಸ್ಥಿತಿಯನ್ನು ನೋಡಿದರೆ ಇಂತಹ ಒಂದು ಭಾವನೆ ನಮ್ಮ ಮೈಮನಸ್ಸುಗಳನ್ನು ಕಲಕಿಬಿಡುತ್ತದೆ. ಸೇತುವೆ ಕೆಳಗಿಳಿದು ಬರಿದಾಗಿರುವ ನದಿಯ ಒಡಲಿನ ಮಧ್ಯೆ ನಿಂತು ಒಮ್ಮೆ ಕಣ್ಣಾಡಿಸಿದರೆ ಕಾವೇರಿ ನದಿ ಕೆಂಗೇರಿ ಮೋರಿಗೇ ಕಾಂಪಿಟೀಷನ್ ನೀಡುತ್ತಿದೆಯೇನೋ ಅನಿಸುತ್ತದೆ. ನದಿಯ ಒಡಲು ಅಷ್ಟೊಂದು ಕುಲಗೆಟ್ಟು ಹೋಗಿದೆ. ವಿಪರೀತ ದುರ್ನಾತದಿಂದಾಗಿ ಅಲ್ಲಿ ನಿಲ್ಲಲೂ ಸಾಧ್ಯವಾಗುವುದಿಲ್ಲ. ಕಾವೇರಿ ನದಿ ಈಗಾಗಲೇ ಹರಿಯುವಿಕೆ ನಿಲ್ಲಿಸಿರುವುದರಿಂದ ಕಸದ ರಾಶಿ ನೀರಿನೊಂದಿಗೆ ಬೆರೆತು ಕೊಳೆತು ಗಬ್ಬೆದ್ದು ಹೋಗಿದೆ. ಇದು ನಮ್ಮ ಕಾವೇರಿ ನದಿಯೇ ಎಂಬದನ್ನು ಊಹಿಸಲೂ ಆಗದಷ್ಟು ಮಲಿನವಾಗಿದೆ.

ಧಾರ್ಮಿಕ ಆಚರಣೆಗಳೇ ಕಾವೇರಿಗೆ ಮುಳುವು

ಕಾವೇರಿ ನದಿ ಒಡಲು ಇಷ್ಟೊಂದು ಮಲಿನವಾಗಲು ಕಾರಣವಾದರೂ ಏನು ಎಂಬದನ್ನು ನೋಡಿದರೆ ಪರಿಸ್ಥಿತಿ ಅರ್ಥವಾಗಲು ಹೆಚ್ಚು ಸಮಯ ಬೇಕಾಗುವದಿಲ್ಲ. ನದಿಯ ತುಂಬಾ ಪೂಜೆ ಪುನಸ್ಕಾರ, ಹೋಮ, ಹವನ, ಮಾಟಮಂತ್ರ ಮಾಡಿ ಬಿಸುಟ ಮಡಿಕೆ, ಕುಡಿಕೆಗಳು, ದಾರಗಳು, ದೇವರ ಫೋಟೋಗಳು ಕುಂಕುಮ ಭಸ್ಮಗಳು ರಾಶಿ ರಾಶಿ ಬಿದ್ದಿವೆ. ಕೆಲವರು ಎಲ್ಲೋ ಪೂಜೆ ಮಾಡಿ ತಂದು ಕಾವೇರಿಯಲ್ಲಿ ಅದನ್ನು ಎಸೆದು ಹೋಗುತ್ತಾರೆ. ಮತ್ತೆ ಕೆಲವರು ನೇರ ಕಾವೇರಿ ನದಿಯ ಒಡಲಿಗೇ ಇಳಿದು ಅಲ್ಲಿಯೇ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿ ಉಳಿದ ಎಲ್ಲಾ ಪರಿಕರಗಳನ್ನು ನದಿಯಲ್ಲೇ ಎಸೆದು ಹೋಗುತ್ತಾರೆ. ದುರಂತ ಎಂದರೆ ಯಾವ ಕಾವೇರಿಯ ಒಡಲಿನಲ್ಲಿ ನಿಂತು ಪೂಜೆ ಮಾಡುತ್ತಾರೋ ಆ ಮಂದಿಗೆ ತಾವು ಅದೇ ಜೀವನದಿಯನ್ನು ಕಲುಷಿತಗೊಳಿಸುತ್ತಿದ್ದೇವೆ ಎಂಬ ಪ್ರಜ್ಞೆಯೇ ಇಲ್ಲದಿರುವದು.

ಕೊಳೆತು ನಾರುತ್ತಿದೆ ಕಾವೇರಿ

ಸ್ಥಳೀಯರು ಮತ್ತು ಎಲ್ಲಿಂದಲೋ ಬರುವ ಮಂಂದಿ ಸೇತುವೆ ಮೇಲಿಂದಲೇ ಕಸದ ರಾಶಿಯನ್ನು ನದಿಗೆ ಸುರಿಯುತ್ತಾರೆ. ಹೊಟೇಲ್‍ಗಳ ತ್ಯಾಜ್ಯ ನಿಂತ ನೀರಿನಲ್ಲಿ ಬೆರತು ಬಣ್ಣ ಬದಲಾಗಿ ಕೊಳೆತ ವಾಸನೆ ವಾಕರಿಕೆ ತರುತ್ತದೆ. ಹಾಗಾಗಿ ಈ ನದಿ ಅಕ್ಷರಶಃ ಕಸ ವಿಲೇವಾರಿ ಕೇಂದ್ರದಂತೆಯೇ ಭಾಸವಾಗುತ್ತದೆ. ಇದರ ಜೊತೆಗೆ ರಾಶಿ ರಾಶಿ ಪ್ಲಾಸ್ಟಿಕ್‍ಗಳು, ಹಾಳಾದ ಬಟ್ಟೆಗಳು, ಸ್ಯಾನಿಟರಿ ಪ್ಯಾಡ್‍ಗಳು ಒಂದಾ ಎರಡಾ... ಕಾವೇರಿಯನ್ನು ಇಷ್ಟೊಂದು ಮಲಿನ ಮಾಡುತ್ತಿರುವ ಈ ದುಷ್ಟ ಜನರಾದರೂ ಯಾರು ಎಂಬದನ್ನು ನೆನೆಯುತ್ತಾ ರಕ್ತ ಕುದಿಯುತ್ತದೆ.

ಆಳುವ ವರ್ಗದ ನಿಷ್ಕ್ರಿಯತೆ

ಕುಶಾಲನಗರ ಪಟ್ಟಣ ಪಂಚಾಯಿತಿಯ ಮೂಗಿನ ಕೆಳಗಲ್ಲೇ ಇರುವ ಈ ನದಿ ಇಷ್ಟೊಂದು ಮಲಿನವಾಗಲು ಕಾರಣ ಕೇಳಿದರೆ ಸಿಗುವದು ಮತ್ತದೇ ರೆಡಿಮೇಡ್ ಬೇಜವಾಬ್ದಾರಿ ಉತ್ತರಗಳು. ಯಾರು ಬಂದು ಕಸ ಹಾಕುತ್ತಾರೋ ಯಾರಿಗೆ ಗೊತ್ತು? ನಾವು ಕಾಯುತ್ತಾ ಕೂರಲು ಆಗುತ್ತದೆಯೇ ಎಂಬದು ಪಂಚಾಯಿತಿ ಅಧ್ಯಕ್ಷೆಯ ನುಡಿ.

ಕಾವೇರಿ ನದಿಯನ್ನು ಮಲಿನಗೊಳಿಸದಂತೆ ಕಾಯಲು, ತಡೆಯಲು ಜನಪ್ರತಿನಿಧಿಗಳು ಮತ್ತು ಅಧಿಕಾರ ವರ್ಗಕ್ಕೆ ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ಅವರುಗಳು ಆ ಹುದ್ದೆಯಲ್ಲಿ ಮುಂದುವರಿಯಲು ಅಯೋಗ್ಯರೆಂದೇ ಅರ್ಥ. ಬಜೆಟ್‍ನಲ್ಲಿ ಕಾವೇರಿ ಸ್ವಚ್ಛತೆಗೆಂದೇ ಐದು ಲಕ್ಷ ರೂಪಾಯಿ ಇಟ್ಟಿದ್ದಾರಂತೆ. ಆದರೆ ಕಾವೇರಿಯ ಒಡಲು ಮಾತ್ರ ಪ್ರತಿನಿತ್ಯ ಕಸದ ರಾಶಿಯಲ್ಲಿ ಮುಳುಗುತ್ತಲೇ ಇದೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ವಿಶೇಷವಾಗಿ ಕೊಪ್ಪ ಸೇತುವೆ ಬಳಿ ಕಾವೇರಿನ ಮಾಲಿನ್ಯವನ್ನು ತಡೆಯುವದು ಕಷ್ಟವಾದರೂ ಅಸಾಧ್ಯವಲ್ಲ. ಜನಪ್ರತಿನಿಧಿಗಳು, ಆಡಳಿತ ವರ್ಗ, ಸಂಘ-ಸಂಸ್ಥೆಗಳು ಒಟ್ಟಾಗಿ ಇಚ್ಛಾಶಕ್ತಿ ಪ್ರದರ್ಶಿಸಿದರೆ ಕಾವೇರಿ ಮಾಲಿನ್ಯವನ್ನು ತಡೆಗಟ್ಟಬಹುದು.

- ಐಮಂಡ ಗೋಪಾಲ್ ಸೋಮಯ್ಯ, ಮರಗೋಡು