ಮಡಿಕೇರಿ, ಮಾ. 26: ಕಣ್ಣಂಗಾಲ ಗ್ರಾ.ಪಂ. ವ್ಯಾಪ್ತಿಯ ಪಚ್ಚಟ್ಟು ಗ್ರಾಮದಲ್ಲಿ ಅರ್ಹ ದಲಿತ ಫಲಾನುಭವಿಗಳು ಜಾನುವಾರುಗಳ ಸಾಕಾಣಿಕೆಗಾಗಿ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದು, ಇದಕ್ಕೆ ಖರ್ಚಾದ ಹಣವನ್ನು ಬಿಡುಗಡೆ ಮಾಡದೆ ಗ್ರಾ.ಪಂ. ಸತಾಯಿಸುತ್ತಿದೆ ಎಂದು ಆರೋಪಿಸಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ದೂರು ನೀಡಿದೆ. ದ.ಸಂ.ಸ.ಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ನೇತೃತ್ವದಲ್ಲಿ ಜಿ.ಪಂ. ಸಿ.ಇ.ಓ. ಬಳಿ ತೆರಳಿದ ಫಲಾನುಭವಿಗಳು ತಮಗಾಗಿರುವ ಅನ್ಯಾಯದ ಬಗ್ಗೆ ವಿವರಿಸಿದರು. ಈ ಸಂದರ್ಭ ಮಾತನಾಡಿದ ದಿವಾಕರ್, ಕಣ್ಣಂಗಾಲ ಗ್ರಾ.ಪಂ.ಯ ಸಲಹೆಯಂತೆ ಎಂ.ಎನ್. ನಾರಾಯಣ, ಎಂ.ಕೆ. ಚನಿಯಪ್ಪ, ಪಿ.ಸಿ. ಕಮಲ, ಚಿತ್ರ, ಉಕ್ರಪ್ಪ, ಶಿವಪ್ಪ, ಪಿ.ಸಿ. ಆನಂದ ಹಾಗೂ ಬಿಲ್ಲವ ಚನಿಯಪ್ಪ ಸೇರಿದಂತೆ ಎಂಟು ಮಂದಿ ಫಲಾನುಭವಿಗಳು 2015-16ರಲ್ಲಿ ಕೊಟ್ಟಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೊಟ್ಟಿಗೆ ನಿರ್ಮಾಣವಾದ ನಂತರ ನಾಲ್ವರು ಫಲಾನುಭವಿಗಳಿಗೆ ತಲಾ ರೂ. 36 ಸಾವಿರ ಹಾಗೂ ಉಳಿದ ಫಲಾನುಭವಿಗಳಿಗೆ ತಲಾ ರೂ. 16 ಸಾವಿರ ನೀಡುವದಾಗಿ ಪಂಚಾಯಿತಿ ಭರವಸೆ ನೀಡಿತ್ತು. ಆದರೆ ಸಾಲ ಮಾಡಿ ಕೊಟ್ಟಿಗೆ ನಿರ್ಮಿಸಿದ ನಂತರ ಕೆಲವು ಫಲಾನುಭವಿಗಳಿಗೆ ಅಲ್ಪ ಮೊತ್ತದ ಹಣ ನೀಡಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದರು. ದ.ಸಂ.ಸ.ಯ ಪ್ರಮುಖರಾದ ದೀಪಕ್ ಹಾಗೂ ನೊಂದ ಫಲಾನುಭವಿಗಳು ಈ ಸಂದರ್ಭ ಹಾಜರಿದ್ದರು.