ಕುಶಾಲನಗರ, ಮಾ. 26: ಕಾವೇರಿ ನದಿಯಲ್ಲಿ ಮತ್ತು ಇನ್ನಿತರೆ ನದಿ ಪಾತ್ರದ ಭಾಗಗಳಲ್ಲಿ ರಿವರ್ ರ್ಯಾಫ್ಟಿಂಗ್ ಉದ್ದಿಮೆ ಹಾಗೂ ಇನ್ನಿತರ ವಾಣಿಜ್ಯ ಚಟುವಟಿಕೆಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗುವದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಭರವಸೆ ನೀಡಿದ್ದಾರೆ. ಕಾವೇರಿ ನದಿ ಅಸ್ತಿತ್ವ ಉಳಿಸುವ ನಿಟ್ಟಿನಲ್ಲಿ ರ್ಯಾಫ್ಟಿಂಗ್ ಮತ್ತು ಇತರೆ ವಾಣಿಜ್ಯ ಚಟುವಟಿಕೆಗಳಿಗೆ ಶಾಶ್ವತ ನಿರ್ಬಂಧ ವಿಧಿಸುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕÀ ಎಂ.ಎನ್.ಚಂದ್ರಮೋಹನ್ ಸಚಿವರು ಜಿಲ್ಲೆಗೆ ಬಂದಾಗ ಮನವಿ ಪತ್ರ ಸಲ್ಲಿಸಿದ ಸಂದರ್ಭ ಪ್ರತಿಕ್ರಿಯಿಸಿದ ಅವರು, ಈಗಾಗಲೆ ಕೊಡಗು ಜಿಲ್ಲಾಧಿಕಾರಿ ಕೊಡಗು ಜಿಲ್ಲೆಯಾದ್ಯಂತ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ರಿವರ್ ರ್ಯಾಫ್ಟಿಂಗ್ ಅನ್ನು ತಾತ್ಕಾಲಿಕವಾಗಿ ನಿಷೇದಿಸಿದ್ದು ಮುಂದಿನ ಕ್ರಮಕ್ಕೆ ಸೂಚಿಸಲಾಗುವದು ಎಂದಿದ್ದಾರೆ.
ಜಿಲ್ಲೆಯ ವಿವಿಧೆಡೆ ಪ್ರವಾಸಿ ಕೇಂದ್ರದ ಹೆಸರಿನಲ್ಲಿ ಕಾವೇರಿ ನದಿ ತೀರದ ತಟವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರ್ಯಾಫ್ಟಿಂಗ್ ಬೋಟಿಂಗ್ ಮತ್ತಿತರ ಜಲಕ್ರೀಡೆ ನಡೆಸುವದರೊಂದಿಗೆ ನದಿ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ನದಿ ತಟದಲ್ಲಿ ಅಕ್ರಮವಾಗಿ ಮಣ್ಣು ಸುರಿದು ನದಿಯ ಅಸ್ತಿತ್ವಕ್ಕೆ ಧಕ್ಕೆ ತರುತ್ತಿರುವ ಬಗ್ಗೆ ಸ್ಥಳೀಯ ಆಡಳಿತಾಧಿಕಾರಿಗಳು ಮೌನ ವಹಿಸಿರುವದು, ಪ್ರವಾಸಿಗರೊಂದಿಗೆ ಅನುಚಿತ ವರ್ತನೆ, ಹಲ್ಲೆ, ಕೊಲೆ ಪ್ರಕರಣಗಳು ದಾಖಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ನಿರ್ಬಂಧಿಸುವಂತೆ ಸಚಿವರಿಗೆ ಸಲ್ಲಿಸಲಾದ ಮನವಿಯಲ್ಲಿ ಕೋರಲಾಗಿದೆ.ಮನವಿ ಪತ್ರ ಸಲ್ಲಿಸಲಾಗಿದೆ.