ಮಡಿಕೇರಿ, ಮಾ.26 : ಏಕ ಪದವಿ ಏಕ ಪಿಂಚಣಿ ಯೋಜನೆಯನ್ನು ಅರೆಸೇನಾ ಪಡೆಯ ನಿವೃತ್ತ ಯೋಧರಿಗೆ ವಿಸ್ತರಿಸದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ನೋಟಾಕ್ಕೆ ಮತ ಹಾಕಲು ನಿರ್ಧರಿಸಿರುವದಾಗಿ ಅರೆಸೇನಾ ಪಡೆಯ ನಿವೃತ್ತ ಯೋಧರ ಒಕ್ಕೂಟ ನಿರ್ಧರಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎಂ.ಜಿ.ಯತೀಶ್, ಇತರ ಯೋಧರಿಗೆ ನೀಡುವಂತೆ ಏಕ ಪದವಿ ಏಕ ಪಿಂಚಣಿ ಯೋಜನೆಯನ್ನು ಅರೆಸೇನಾ ಪಡೆಯ ನಿವೃತ್ತ ಯೋಧರಿಗೂ ವಿಸ್ತರಿಸುವದಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪೊಳ್ಳು ಭರವಸೆ ನೀಡಿದ್ದಾರೆ. ನಿವೃತ್ತ ಸೈನಿಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಅರೆಸೇನಾ ಪಡೆಯ ನಿವೃತ್ತ ಯೋಧರಿಗೂ ವಿಸ್ತರಿಸುವ ಭರವಸೆ ಇಲ್ಲಿಯವರೆಗೆ ಈಡೇರಿಲ್ಲವೆಂದು ಆರೋಪಿಸಿದರು.
ಏಕ ಪದವಿ ಏಕ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶದ ಅರೆಸೇನಾ ಪಡೆಯ ನಿವೃತ್ತ ಯೋಧರು ಏ.6 ರಂದು ದೆಹಲಿಯ ರಾಜ್‍ಘಾಟ್‍ನಲ್ಲಿ ರಾಷ್ಟ್ರೀಯ ಮಟ್ಟದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಇವರುಗಳಿಗೆ ಬೆಂಬಲ ಸೂಚಿಸುವ ಸಲುವಾಗಿ ಜಿಲ್ಲಾ ಒಕ್ಕೂಟ ಅಂದು ನಗರದ ಗಾಂಧಿ ಮಂಟಪದ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿರುವದಾಗಿ ಯತೀಶ್ ತಿಳಿಸಿದರು. ಒಕ್ಕೂಟದ ಉಪಾಧ್ಯಕ್ಷ ಪಿ.ಎಂ.ಚಂಗಪ್ಪ ಮಾತನಾಡಿ, ಅರೆಸೇನಾ ಪಡೆ ಯೋಧರಿಗಿಂತ ಹೆಚ್ಚಿನ ಭೂ ಬಲವನ್ನು ವಿಸ್ತರಿಸಿಕೊಂಡಿದೆ. ಶತ್ರುಗಳಿಂದ ಮೊದಲ ಗುಂಡು ಬೀಳುವದೇ ಬಿಎಸ್‍ಎಫ್ ಮತ್ತು ಐಟಿಬಿಪಿಎಫ್ ಯೋಧರಿಗೆ ಎಂದು ಗಮನ ಸೆಳೆದರು.
ಕೊಡಗು ಜಿಲ್ಲೆಯಲ್ಲಿ ಅರೆಸೇನಾಪಡೆ ಯೋಧರ ಸುಮಾರು 1200 ವಿಧವೆ ಪತ್ನಿಯರಿದ್ದಾರೆ. ಅರೆಸೇನಾ ಪಡೆಯ ನಿವೃತ್ತ ಯೋಧರಿಗೆ ವಿವಿಧ ಸೌಲಭ್ಯಗಳನ್ನು ಘೋಷಿಸಲಾಯಿತಾದರೂ ಇಲ್ಲಿಯವರೆಗೆ ಅವುಗಳು ನಮಗೆ ದೊರಕಿಲ್ಲ. ಆದರೆ ಇತರ ಯೋಧರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಬೆÉೀಸರ ವ್ಯಕ್ತಪಡಿಸಿದರು. ಇದೇ ಕಾರಣಕ್ಕೆ ಕೊಡಗಿನ ಯುವ ಸಮೂಹ ಇತ್ತೀಚಿನ ದಿನಗಳಲ್ಲಿ ಸೇನೆಗೆ ಸೇರಲು ಆಸಕ್ತಿ ತೋರುತ್ತಿಲ್ಲವೆಂದು ಅಭಿಪ್ರಾಯಪಟ್ಟರು.
ಸಲಹೆಗಾರರಾದ ಕೆ.ಎಸ್.ಆನಂದ ಮಾತನಾಡಿ, ಒಕ್ಕೂಟಕ್ಕೆ ಜಿಲ್ಲಾಡಳಿತ 20 ಸೆಂಟ್ ಜಾಗ ಮಂಜೂರು ಮಾಡದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವೀರಾಜಪೇಟೆ ಒಕ್ಕೂಟದÀ ಅಧ್ಯಕ್ಷ ರಮೇಶ್ ಅಪ್ಪಯ್ಯ ಮಾತನಾಡಿ, ನಮ್ಮ ನಿರ್ಲಕ್ಷ್ಯವನ್ನು ಖಂಡಿಸಿ ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ನಿವೃತ್ತ ಅರೆಸೇನಾ ಯೋಧರು ಹಾಗೂ ಅವರ ಕುಟುಂಬದ ಸದಸ್ಯರು ನೋಟಾಕ್ಕೆ ಮತಹಾಕಲು ನಿರ್ಧರಿಸಿರುವದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಎನ್.ಎಂ. ಭೀಮಯ್ಯ ಹಾಗೂ ರಾಜಶೇಖರ್ ರೈ ಉಪಸ್ಥಿತರಿದ್ದರು.