ಗುಡ್ಡಹೊಸೂರು, ಮಾ. 26: ನದಿಯಲ್ಲಿ ಅಡ್ಡಲಾಗಿರುವ ದೊಡ್ಡ - ದೊಡ್ಡ ಬಂಡೆಗಳನ್ನು ಪುಡಿಗಟ್ಟಿ ಅಲ್ಲಿ ಸಂಗ್ರಹಗೊಂಡಿರುವ ನೀರನ್ನು ಮುಂದಕ್ಕೆ ಹರಿಯಬಿಡುವ ವಿಚಿತ್ರ ಪ್ರಯತ್ನವೊಂದು ಇಲ್ಲಿ ನಡೆಯುತ್ತಿದೆ. ಕ್ರಷರ್‍ಗಳನ್ನು ಬಳಸಿ ಬಂಡೆಗಳನ್ನು ಒಡೆಯುವ ಪ್ರಯತ್ನವಾಗುತ್ತಿದ್ದು, ಈ ವ್ಯರ್ಥ ಪ್ರಯತ್ನದ ಬಗ್ಗೆ ರೈತರು ಅಸಮಾಧಾನಗೊಂಡಿದ್ದಾರೆ.

ಗುಡ್ಡೆಹೊಸೂರು ಬಳಿಯ ತೆಪ್ಪದಕಂಡಿ ಎಂಬ ಪ್ರದೇಶದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಬಂಡೆಕಲ್ಲುಗಳು ಹಾಸಿಗೊಂಡಿವೆ. ಇದರಿಂದಾಗಿ ಅಲ್ಲಿ ಒಂದಿಷ್ಟು ನೀರು ಸಂಗ್ರಹಗೊಳ್ಳುತ್ತದೆ. ಈ ಹಿಂದೆ ಇಲ್ಲಿ ನದಿದಾಟಲು ತೆಪ್ಪವನ್ನು ಬಳಸಿಕೊಳ್ಳಲಾಗುತ್ತಿದ್ದು, ಇದೀಗ ತೂಗು ಸೇತುವೆ ನಿರ್ಮಾಣವಾಗಿದೆ. ಸೇತುವೆ ಬಳಿ ಸಂಗ್ರಹಗೊಂಡಿರುವ ನೀರನ್ನು ಅಡ್ಡಲಾಗಿರುವ ಬಂಡೆಗಳನ್ನು ಒಡೆದು ಮುಂದಕ್ಕೆ ಹರಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಈ ನೀರನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತಿದೆ ಎಂಬ ವಿಚಾರ ಯಾರಿಗೂ ತಿಳಿದಿಲ್ಲ.

ಒಂದು ವೇಳೆ ಕುಶಾಲನಗರಕ್ಕೆ ಕುಡಿಯುವ ನೀರನ್ನೊದಗಿಸುವ ಪ್ರಯತ್ನ ಆಗಿದ್ದರೂ, ಇಲ್ಲಿ ಸಂಗ್ರಹಗೊಂಡಿರುವ ನೀರು ಕುಶಾಲನಗರ ಇರಲಿ ಮುಂದಕ್ಕೆ ಒಂದು ಕಿ.ಮೀ.ವರೆಗೂ ತಲಪುವದಿಲ್ಲ. ಅಲ್ಲಿಗೆ ಸಂಗ್ರಹಗೊಂಡಿರುವ ನೀರು ಕೂಡ ಖಾಲಿಯಾಗಲಿದ್ದು, ಇನ್ನೂ ಸಂಗ್ರಹಗೊಳ್ಳುವದೂ ಇಲ್ಲ.

ನಾಟಿಗದ್ದೆಯೇ..?

ಗುಂಡಿಯಲ್ಲಿ ತುಂಬಿಕೊಂಡಿರುವ ನೀರನ್ನು ಹರಿಸಲು ಬಂಡೆ ಒಡೆಯುವ ಹುಚ್ಚು ಪ್ರಯತ್ನಕ್ಕೆ ಕೈ ಹಾಕಿರುವ ಬುದ್ಧಿವಂತ ಅಧಿಕಾರಿ ಯಾರೆಂಬದು ಇಲ್ಲಿಯ ರೈತ ಪ್ರಶ್ನೆ? ಅಷ್ಟಕ್ಕೂ ಚರಂಡಿ ಮಾಡಿ ನೀರು ಹರಿಸಲು ನದಿಯೇನು ಭತ್ತದ ನಾಟಿ ಗದ್ದೆಯೇ? ಎಂದು ಪ್ರಶ್ನಿಸಿರುವ ರೈತರು, ಬಂಡೆ ಒಡೆಯುವ ಬದಲಿಗೆ ಕುಡಿಯುವ ನೀರಿನ ಸಮಸ್ಯೆ ಇರುವಲ್ಲಿ ಬದಲೀ ವ್ಯವಸ್ಥೆಯೊಂದಿಗೆ ಕೊಳವೆ ಬಾವಿ ಕೊರೆದು ಕ್ರಮ ಕೈಗೊಳ್ಳುವದೊಳಿತೆಂದು ಅಭಿಪ್ರಾಯಿಸಿದ್ದಾರೆ.

ರೈತರಿಗೆ ತೊಂದರೆ

ಈ ನಡುವೆ ಹಾರಂಗಿಯಿಂದ ನದಿಗೆ ನೀರು ಬಿಡಲಾಗುತ್ತಿದೆ. ಇದರಿಂದ ಕುಶಾಲನಗರ ಜನತೆಗಾಗಲಿ, ರೈತರಿಗಾಗಲೀ ಯಾವದೇ ಪ್ರಯೋಜನವಿಲ್ಲ ಚಿಕ್ಲಿಹೊಳೆಯಲ್ಲಿರುವ ನೀರನ್ನು ಕೂಡ ಹರಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗಲಿದೆ. ಈಗಾಗಲೇ ಗುಡ್ಡೆಹೊಸೂರು ಸುತ್ತಮುತ್ತ ವ್ಯವಸಾಯಕ್ಕೆ ಹಾಗೂ ಕುಡಿಯುವ ನೀರಿಗೆ ತೊಂದರೆ ಕಾಣಿಸಿಕೊಂಡಿದೆ. ಇದೀಗ ಬಂಡೆ ಒಡೆದು ಇರುವ ನೀರನ್ನೂ ಮುಂದಕ್ಕೆ ಹರಿಯಬಿಟ್ಟರೆ ಮತ್ತಷ್ಟು ತೊಂದರೆಯಾಗಲಿದೆ ಎಂದು ರೈತರುಗಳಾದ ಧನಪಾಲ್, ಪುರುಷೋತ್ತಮ, ಕುಮಾರ, ಗಣೇಶ್, ರಾಜು, ಸೋಮಣ್ಣ, ಇದ್ರಿಶ್, ಸೋಮಶೇಖರ್ ಅವರುಗಳು ಅಳಲು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಅನವಶ್ಯಕ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕದೆ ನದಿ ಸಂರಕ್ಷಣೆಯೊಂದಿಗೆ ಪೂರಕ ನೀರಿನ ವ್ಯವಸ್ಥೆ ಮಾಡುವತ್ತ ಗಮನ ಹರಿಸುವಂತಾಗಲಿ ಎಂದು ರೈತರು ಒತ್ತಾಯಿಸಿದ್ದಾರೆ.

-ಕುಡೆಕಲ್ ಗಣೇಶ್

ಕುಶಾಲನಗರ : ಕುಶಾಲನಗರ ಪಟ್ಟಣಕ್ಕೆ ನೀರು ಹರಿಸಲು ಗುಡ್ಡೆಹೊಸೂರು ಬಳಿ ಕಾವೇರಿ ನದಿಯಲ್ಲಿ ಅಡ್ಡಿಯಾಗಿದ್ದ ಕಲ್ಲು ಬಂಡೆಗಳ ತೆರವು ಕಾರ್ಯಾಚರಣೆಯನ್ನು ಗುಡ್ಡೆಹೊಸೂರು ಹಿತರಕ್ಷಣಾ ಸಮಿತಿ ವಿರೋಧಿಸಿದ್ದು ತಕ್ಷಣ ಕೆಲಸ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಲಮಂಡಳಿ ಅಧಿಕಾರಿಗಳು ಬಂಡೆ ಒಡೆಯುವ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.

ತೆಪ್ಪದಕಂಡಿ ಬಳಿ ಕಲ್ಲು ಬಂಡೆಗಳ ನಡುವೆ ಸಂಗ್ರಹವಾಗಿರುವ ನೀರನ್ನು ಹರಿಸಲು ಕಳೆದ ಕೆಲವು ದಿನಗಳಿಂದ ಜಲಮಂಡಳಿ ಅಧಿಕಾರಿಗಳು ಬಂಡೆ ಒಡೆಯುವ ಕೆಲಸ ಆರಂಭಿಸಿದ್ದರು. ಈ ಅವೈಜ್ಞಾನಿಕ ಕಾರ್ಯಾಚರಣೆಯಿಂದ ನದಿಯ ನೈಸರ್ಗಿಕ ಹರಿವಿನ ಹಾದಿ ಏರುಪೇರಾಗಲಿದೆ. ಈ ಮೂಲಕ ಅಪಾಯದ ಸಾಧ್ಯತೆ ಉಂಟಾಗಲಿದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ನೀರಿನ ಅವಶ್ಯಕತೆ ಇರುವ ಕುಶಾಲನಗರ ಪಟ್ಟಣಕ್ಕೆ ಟ್ಯಾಂಕರ್ ಮೂಲಕ ನೀರು ಹರಿಸಲು ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸಂಪೂರ್ಣ ಸಹಕಾರ ನೀಡುವದಾಗಿ ಸಮಿತಿ ಅಧ್ಯಕ್ಷ ಬಿ.ಎನ್.ಶಶಿಕುಮಾರ್ ಭರವಸೆ ನೀಡಿದರು. ನದಿಯ ಬಂಡೆಗಳನ್ನು ಒಡೆಯುವ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜಲಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಕೆಲಸ ನಡೆಯುತ್ತಿದ್ದು, ನದಿಯಲ್ಲಿರುವ ಬಂಡೆಗಳಲ್ಲಿ 50 ಕ್ಕೂ ಅಧಿಕ ಗುಳಿ ನಿರ್ಮಿಸಿ ಸ್ಪೋಟಕ್ಕೆ ತಯಾರಿ ನಡೆಸಲಾಗಿತ್ತು. ಜನರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಅವುಗಳನ್ನು ತೆರವುಗೊಳಿಸುವ ಕಾರ್ಯ ನಡೆಸಿದರು. ಈ ಸಂದರ್ಭ ಹಿತರಕ್ಷಣಾ ಸಮಿತಿ ಪ್ರಮುಖರಾದ ಉತ್ತಪ್ಪ, ಅರುಣ್, ಮನು, ಉದಯ, ಲೋಕೇಶ, ಜಯರಾಂ ಮತ್ತಿತರರು ಇದ್ದರು.