ವೀರಾಜಪೇಟೆ, ಮಾ. 26 : ಪ್ರತಿಯೊಬ್ಬರಲ್ಲಿಯೂ ಕೌಶಲ್ಯಕ್ಕೆ ಅವಕಾಶ ಇಲ್ಲದಿರುವದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಕೌಶಲ್ಯಕ್ಕೆ ಪೂರಕವಾದ ತರಬೇತಿಯನ್ನು ಕೌಶಲ್ಯ ಕೇಂದ್ರದಲ್ಲಿ ಪಡೆದು ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ನಡೆಸುವ ಸಾಮಥ್ರ್ಯ ಪಡೆದುಕೊಂಡರೆ ನಿರುದ್ಯೋಗ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಕಾವೇರಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಹಾಗೂ ಕಾಫಿ ಮಂಡಳಿಯ ಉಪಾಧ್ಯಕ್ಷೆ ರೀನಾ ಪ್ರಕಾಶ್ ಹೇಳಿದರು.

ವೀರಾಜಪೇಟೆ ಕಾವೇರಿ ಕಾಲೇಜು ಮತ್ತು ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ತಜ್ಞ ವೈದ್ಯ ಡಾ. ನವೀನ್ ಮಾತನಾಡಿ, ಸ್ವಾಮಿ ವಿವೇಕಾನಂದರ ವಾಣಿಯಂತೆ ಯುವ ಜನತೆಯೇ ದೇಶದ ಸಂಪನ್ಮೂಲ ಹಾಗೂ ಭರವಸೆಯ ಬೆಳಕು. ಯಾವದೇ ಕಾರಣಕ್ಕೂ ಎದೆಗುಂದದೆ ಮುನ್ನಡೆದರೆ ಮುಂದಿನ ಗುರಿ ತಲಪಲು ಸಾಧ್ಯವಾಗುತ್ತದೆ ಎಂದರು.

ಪ್ರಾಂಶುಪಾಲ ಸಿ.ಎಂ. ನಾಚಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತರ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದ ಜನರು ಬುದ್ದಿವಂತರು. ಬುದ್ದಿ ಹೀನರಾಗಿದ್ದರೆ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಹೊಂದುತ್ತಿರಲಿಲ್ಲ. ಸ್ವಾತಂತ್ರ್ಯ ಬಂದು ವರ್ಷಗಳೇ ಉರುಳಿದರೂ ಅವರವರ ಕೌಶಲ್ಯಗಳನ್ನು ಬಳಸಲು ವ್ಯವಸ್ಥೆಯಲ್ಲಿ ಅವಕಾಶ ಇಲ್ಲದಿರುವದು ವಿಷಾದನಿಯ ಎಂದರು.

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಸದಸ್ಯ ವೆಂಕಟೇಶ್ ಕೌಶಲ್ಯ ಅಭಿವೃದ್ಧಿ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಸಂಯೋಜಕರು ಮತ್ತು ಬಿಬಿಎ ವಿಭಾಗದ ಪ್ರಮುಖರಾದ ಎಲ್.ಆರ್. ರಾಘವೇಂದ್ರ ಉಪಸ್ಥಿತರಿದ್ದರು.