ಮಡಿಕೇರಿ, ಮಾ. 26: ಜೀವನದಿ ಕಾವೇರಿಯನ್ನು ಉಳಿಸಿಕೊಳ್ಳಲು ಹೆಚ್ಚಾಗಿ ಮರಗಿಡಗಳನ್ನು ನೆಟ್ಟು ಬೆಳೆಸುವದರೊಂದಿಗೆ, ಇಲ್ಲಿನ ಸಂಸ್ಕøತಿ, ಉಡುಗೆ - ತೊಡಿಗೆ, ಜೀವನ ಕ್ರಮವನ್ನು ಕಾಪಾಡಿಕೊಳ್ಳುವಂತೆ ಆರ್ಟ್ ಆಫ್ ಲೀವಿಂಗ್ ಮುಖ್ಯಸ್ಥ ಶ್ರೀ ರವಿಶಂಕರ್ ಗುರೂಜಿ ಕರೆ ನೀಡಿದರು. ಇಲ್ಲಿನ ಕಾವೇರಿ ಹಾಲ್ನಲ್ಲಿ ಈ ಸಂಜೆ ಆಯೋಜಿಸಿದ್ದ ಸತ್ಸಂಗ - ಭಜನೆ - ಧ್ಯಾನದಲ್ಲಿ ಅವರು ಪಾಲ್ಗೊಂಡು ಆಶೀರ್ವಚನ ನೀಡಿದರು.ಕೊಡಗು ಅತ್ಯಂತ ಸುಂದರ ಪರಿಸರ ಹೊಂದಿದ್ದು, ದಕ್ಷಿಣ ಭಾರತಕ್ಕೆ ನೀರುಣಿಸುವ ಕಾವೇರಿಯ ತವರು ಎನ್ನುವದು ಜೀವನ ಸ್ತೋತ್ರದ ಭಾಗವಾಗಿದೆ ಎಂದುವ್ಯಾಖ್ಯಾನಿಸಿದ ಅವರು, ಇಂತಹ ಕೊಡಗಿನಲ್ಲಿ ವಿದೇಶಿ ಸಾಬೂನು, ಪ್ಲಾಸ್ಟಿಕ್ ಇತ್ಯಾದಿ ಬಳಕೆ ಮಾಡದೆ ಸಂಪೂರ್ಣ ಈ ನೆಲವನ್ನು ಸಾವಯವದೊಂದಿಗೆ ಗಿಡ - ಮರಗಳಿಂದ ಸಂರಕ್ಷಿಸಿಕೊಳ್ಳುವಂತೆ ಮಾರ್ನುಡಿದರು.
ಮಕ್ಕಳಿಗೆ ಜ್ಞಾನ ಕೊಡಿಸಿ : ಪ್ರತಿಯೊಬ್ಬರು ಮಕ್ಕಳಿಗೆ ಚಿಕ್ಕಂದಿನಿಂದಲೇ ಎಲ್ಲರನ್ನು ಪ್ರೀತಿಸುವ ರೀತಿ ಸಂಸ್ಕಾರ ನೀಡುವದರೊಂದಿಗೆ ಜ್ಞಾನವನ್ನು ಬೆಳೆಸಿಕೊಳ್ಳುವ ದಿಸೆಯಲ್ಲಿ, ಇನ್ನೊಬ್ಬರಿಗೆ ಹಂಚಿ ತಿನ್ನುವ ಮಾನಸಿಕತೆಯನ್ನು ಪ್ರೇರೇಪಿಸುವಂತೆ ತಿಳಿಹೇಳಿದ ಅವರು, ಹಿಂಸೆಯನ್ನು ಮಾಡದಂತೆ ನಿಗಾವಿಡುವಂತೆಯೂ ಮಾರ್ನುಡಿದರು. ಆಧುನಿಕ ಉಪಕರಣಗಳಾದ ಮೊಬೈಲ್ ಇತ್ಯಾದಿ ಬದಲು ಆಧ್ಯಾತ್ಮಿಕ ವಿಚಾರಗಳನ್ನು ಕಲಿಸುವಂತೆಯೂ ರವಿಶಂಕರ್ ಗುರೂಜಿ ಕಳಕಳಿ ವ್ಯಕ್ತಪಡಿಸಿದರು.
ಜ್ಞಾನ-ವಿಜ್ಞಾನ ಸಮ್ಮಿಲನ : ಇಂದು ಜಗತ್ತಿನಲ್ಲಿ ಆಧ್ಯಾತ್ಮಿಕ ಜ್ಞಾನದೊಂದಿಗೆ ವಿಜ್ಞಾನ ಸಮ್ಮಿಲನದ ಘಟ್ಟದಲ್ಲಿದ್ದು, ನಮ್ಮ ನಶ್ವರ ದೇಹಾಲಂಕಾರಕ್ಕೆ ಒತ್ತು ನೀಡುವ ಬದಲಿಗೆ, ಭಗವಂತನ ಸಾಕ್ಷಾತ್ಕಾರದೆಡೆಗೆ ಮನಸ್ಸು ಕೇಂದ್ರೀಕರಿಸಬೇಕೆಂದು ಅವರು ನೆನಪಿಸಿದರು.
ಶುದ್ಧತೆಯ ತವರು : ಕೊಡಗು ಮಾನವನಿಗೆ ಶುದ್ಧತೆಯ ತವರು ಎಂದು ಹೆಮ್ಮೆಯ ನುಡಿಯಾಡಿದ ಅವರು, ಈ ನೆಲದಲ್ಲಿ ಹಿರಿಯರು ತಮ್ಮ ಮಕ್ಕಳಿಗೆ ಅಂತಜ್ರ್ಞಾನದ ದೂರದೃಷ್ಟಿ ಯೊಂದಿಗೆ ನಿತ್ಯವು ಭಜನೆ, ಮಂತ್ರೋಚ್ಚಾರಗಳನ್ನು ಉಚ್ಚರಿಸು ವಂತೆ ನೋಡಿಕೊಳ್ಳಬೇಕೆಂದರಲ್ಲದೆ, ಆಗ ವಿಶೇಷ ನರಗಳಿಗೆ ಚೈತನ್ಯದ ಮೂಲಕ ಹೃದಯ ಸಂಬಂಧಿ ಕಾಯಿಲೆ, ಮೆದುಳು, ಕಿಡ್ನಿ ಇತ್ಯಾದಿಗಳಿಗೆ ಯಾವ ಬಾಧೆಯೂ ಸೋಂಕುವದಿಲ್ಲವೆಂದು ಆತ್ಮವಿಶ್ವಾಸ ತುಂಬಿದರು.
(ಮೊದಲ ಪುಟದಿಂದ)
ಮನಸ್ಸು ಶತ್ರು - ಮಿತ್ರ: ಪ್ರತಿಯೊಬ್ಬರು ಮನಸ್ಸಿನ ಕಡೆ ಕೇಂದ್ರೀಕರಿಸುವದನ್ನು ಬಿಟ್ಟು ಬುದ್ಧಿ, ಜ್ಞಾನ, ಸಾಕ್ಷಾತ್ಕಾರದೆಡೆಗೆ ಸಾಗುವಂತೆ ತಿಳಿಹೇಳಿದ ಅವರು, ಮನಸ್ಸು ಮೊದಲ ಶತ್ರು ಹಾಗೂ ಮಿತ್ರ ಕೂಡ ಎಂದು ವ್ಯಾಖ್ಯಾನಿಸಿದರು. ಹರಿಯುವ ನೀರಿನಂತೆ ಓಡುವ ಮನಸ್ಸನ್ನು ಹಿಡಿದಿಟ್ಟುಕೊಳ್ಳುವದು ಕಷ್ಟವೆಂದು ಅವರು ನೆನಪಿಸಿದರು.
ದೇವಮಾನವ ಕುಹಕ : ಭಾರತೀಯ ಸಂತ ಪರಂಪರೆಯನ್ನು ದೇವಮಾನವರಂತೆ ಬ್ರಿಟೀಷರು ಕುಹಕದಿಂದ ಹೇಳಿದ್ದಾಗಿದ್ದು, ಅಂತಹ ಹಣೆಪಟ್ಟಿ ಯಾರಿಗೂ ಶೋಭೆಯಲ್ಲವೆಂದು ಭಕ್ತರ ಪ್ರಶ್ನೆಗೆ ಉತ್ತರಿಸಿದ ಗುರೂಜಿ, ತನ್ನ ಬಗ್ಗೆ ಚಿಂತಿಸುವದ್ದನ್ನು ಬಿಟ್ಟು ಆಧ್ಯಾತ್ಮ ಸಾಧನೆಯಲ್ಲಿ ನಿರಂತರ ತೊಡಗಿದರೆ, ಅಂತಿಮವಾಗಿ ಎಲ್ಲವನ್ನೂ ತೊರೆಯುವದು ಸಾಧ್ಯವೆಂದರು. ಆ ದಿಕ್ಕಿನಲ್ಲಿ ಬಯಕೆಗಳನ್ನು ಬಿಡುವದು ಸೂಕ್ತವೆಂದು ಪುನರುಚ್ಚಿಸಿದರು.
ಕಿಕ್ಕಿರಿದ ಸಭಾಂಗಣದಲ್ಲಿ ಸತ್ಸಂಗಿಗಳಿಗೆ 28 ನಿಮಿಷಗಳ ಧ್ಯಾನದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ ಅವರು, ಅರ್ಧಗಂಟೆ ಭಜನೆ ಇತ್ಯಾದಿಯಲ್ಲಿ ಮಗ್ನರಾಗಿದ್ದರು.