ಆಲೂರು ಸಿದ್ದಾಪುರ, ಮಾ. 26: ಗ್ರಾಮಕ್ಕೆ ಕುಡಿಯುವ ನೀರು ಸರಬರಾಜುವಾಗುವ ಮೋಟಾರ್ ಕೆಟ್ಟುಹೋಗಿ ಒಂದು ವಾರವಾದರೂ ಗ್ರಾ.ಪಂ.ಯವರು ದುರಸ್ತಿ ಪಡಿಸದ ಹಿನ್ನೆಲೆಯಲ್ಲಿ ಗ್ರಾ.ಪಂ. ಯವರ ಬೇಜಾವಾಬ್ದಾರಿ ನೀತಿಯನ್ನು ವಿರೋಧಿಸಿ ನೂರಾರು ಗ್ರಾಮಸ್ಥರು ಗ್ರಾ.ಪಂ.ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಚಿಕ್ಕಭಂಡಾರ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜಾಗುವ ಮೋಟಾರ್ ಕೆಟ್ಟುಹೋಗಿದ್ದರೂ ಸಹ ಸಂಬಂಧಪಟ್ಟವರು ಅದನ್ನು ದುರಸ್ತಿಪಡಿಸಿಲ್ಲ. ಗ್ರಾಮದ ಸುಮಾರು 200 ಮನೆಗಳಿಗೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ತಾ. 26ರಂದು ಚಿಕ್ಕಭಂಡಾರ ಗ್ರಾಮದ ಗ್ರಾಮಸ್ಥರು ಬೆಸೂರು ಗ್ರಾ.ಪಂ.ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಗಾರರು ಗ್ರಾ.ಪಂ.ಅಧ್ಯಕ್ಷೆ ಪಾರ್ವತಿ, ವಾರ್ಡ್ ಸದಸ್ಯರು ಹಾಗೂ ಗ್ರಾ.ಪಂ.ಪಿಡಿಒ ವಿರುದ್ಧ ಘೋಷಣೆ ಕೂಗಿದರು. ಮೋಟಾರ್ ಅನ್ನು ಇಂದೇ ದುರಸ್ತಿಪಡಿಸಿ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಗ್ರಾ.ಪಂ.ಅಧ್ಯಕ್ಷರು ಬರುವಂತೆಯೂ ಪ್ರತಿಭಟನೆಗಾರರು ಒತ್ತಾಯಿಸಿದರು. ಆದರೆ ಗ್ರಾ.ಪಂ.ಅಧ್ಯಕ್ಷರು ಪ್ರತಿಭಟನೆ ಕೊನೆಗೊಳ್ಳುವ ತನಕವೂ ಸುಳಿಯದಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು. ಪ್ರತಿಭಟನೆಗಾರರ ಮನವೊಲಿಸಿದ ಗ್ರಾ.ಪಂ.ಪಿಡಿಒ ಯಾದವ್ ಮೋಟಾರ್ ಅನ್ನು 2 ದಿನದ ಒಳಗಡೆ ದುರಸ್ತಿಪಡಿಸಲಾಗುವದು, ಅಲ್ಲಿಯ ತನಕ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತೇವೆ ಎಂದು ಭರವಸೆ ನೀಡಿದ ಮೇಲೆ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಸ್ಥಳಕ್ಕೆ ತಾ.ಪಂ.ಅಧ್ಯಕ್ಷೆ ಪುಷ್ಪರಾಜೇಶ್ , ಶನಿವಾರಸಂತೆ ಠಾಣಾಧಿಕಾರಿ ಆನಂದ್ ಭೇಟಿ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಚಂದ್ರಶೇಖರ್, ಕುಮಾರ್, ಚಂದ್ರ, ನಾಗೇಶ್, ಮಣಿಕಂಠ, ಕೃಷ್ಣಮೂರ್ತಿ, ರೇಣುಕ, ಪ್ರತಿಮಾ, ಗೌರಮ್ಮ, ಶಶಿಕಲ, ಭಾಗ್ಯ, ಹೇಮ, ಕುಸುಮ, ರಾಣಿ, ರಾಜಮ್ಮ, ಸುಮಿತ್ರ ಮುಂತಾದವರಿದ್ದರು.