ಚೆಟ್ಟಳ್ಳಿ, ಮಾ. 26: ಒಳ್ಳೆಯ ಮೈಕಟ್ಟು, ಎತ್ತರದ ನಿಲುವು, ಕಂಚಿನ ಕಂಠ, ಪಾತ್ರಕ್ಕೆ ತಕ್ಕಂತೆ ದೇಹವನ್ನು ಪಳಗಿಸಿಕೊಳ್ಳುವ ಬದ್ಧತೆ ಹೊಂದಿರುವ ಕೊಡಗಿನ ಯುವ ನಟ ಸಂತೋಷ್ ಮೇದಪ್ಪ ಬೆಳ್ಳಿ ತೆರೆಯಲ್ಲಿ ಮಿಂಚುತ್ತಿದ್ದಾರೆ. ಚಲನಚಿತ್ರರಂಗದಲ್ಲಿ ಕೊಡಗಿನ ಕಲಾವಿದರಿಗೇನು ಕಮ್ಮಿ ಇಲ್ಲ. ಯುವಕ-ಯುವತಿಯರು ಚಲನಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಲು ಹೊರಟಿದ್ದಾರೆ. ಆ ಪೈಕಿ ಚೇರಂಬಾಣೆಯ ಬಿ. ಬಾಡಗ ಗ್ರಾಮದ ದಿ. ಚೆಡಿಯಂಡ ಎ. ನಾಣಯ್ಯ ಹಾಗೂ ತಾರಾ ನಾಣಯ್ಯ ದಂಪತಿಗಳ ಪುತ್ರ ಚೆಡಿಯಂಡ ಸಂತೋಷ್ ಮೇದಪ್ಪ ಕೂಡ ಒಬ್ಬರು. ಸಿದ್ದಾಪುರ ಹೈಸ್ಕೂಲ್, ಬಾಳೆಲೆಯ ವಿಜಯಲಕ್ಷ್ಮಿ ಜೂನಿಯರ್ ಕಾಲೇಜುಗಳಲ್ಲಿ ವ್ಯಾಸಂಗ ಮುಗಿಸಿದ ಸಂತೋಷ್‍ನಿಗೆ ವ್ಯಾಸಂಗದ ಸಮಯ ದಲ್ಲಿ ಡ್ರಾಮಾ ಹಾಗೂ ಡ್ಯಾನ್ಸ್‍ನಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಬೆಂಗಳೂರಿಗೆ ತೆರಳಿದ್ದ ಸಂತೋಷ್‍ಗೆ ರಂಗಭೂಮಿ ಪರಿಚಯವಾಗಿ ರಾಜಗುರು ಹೊಸಕೋಟೆಯವರ ಸಾತ್ವಿಕ ರಂಗಪಯಣ ಡ್ರಾಮಾ ತಂಡದಲ್ಲಿ ಸೇರಿ ಚಿತ್ರರಂಗ, ರಂಗಭೂಮಿ, ನಟನೆಯ ನವರಸಗಳನ್ನು ಕರಗತ ಮಾಡ ತೊಡಗಿದರು. ನಂತರದಲ್ಲಿ ಕೊಡಗಿನ ಹಿರಿಯ ರಂಗಭೂಮಿ ಕಲಾವಿದರಾದ ಸೃಷ್ಠಿ ಕೊಡಗು ರಂಗದಲ್ಲಿ ‘ಬದ್‍ಕ್’ ಎಂಬ ಕೊಡವ ನಾಟಕವನ್ನು ದೆಹಲಿಯಲ್ಲಿ ಪ್ರದರ್ಶಿಸಿದರು. ಖ್ಯಾತ ನಿರ್ದೇಶಕ ಎ.ಟಿ. ರಘು ಅವರ ನಿರ್ದೇಶನದ ಜಮ್ಮಭೂಮಿ, ನಂಗಕೊಡವ ಕೊಡವ ಧಾರಾವಾಹಿಯ ಮೂಲಕ ಮೊಟ್ಟ ಮೊದಲ ಬಾರಿಗೆ ಕ್ಯಾಮರಾದ ಮುಂದೆ ನಟಿಸಿದರು. ತನ್ನ ನಟನೆ ಮತ್ತಷ್ಟು ಪಕ್ವವಾಗುತ್ತಿದ್ದಂತೆ ಗೋಪಿ ಪೀಣ್ಯಾ ಅವರ ನಿರ್ದೇಶನದ ನಂಗಕೊಡವ, ತೆಳ್‍ಂಗ್ ನೀರ್ ಚಲನ ಚಿತ್ರದಲ್ಲಿ ಹೀರೋನ ತಂಗಿಯ ಗಂಡನಾಗಿ ನಟಿಸಿದ್ರು. ಓಂಪ್ರಕಾಶ್ ನಿರ್ದೇಶನದಲ್ಲಿ ಲಂಬಾಣಿ ಚಲನ ಚಿತ್ರದಲ್ಲಿ ನಟಿಸಿದ್ದು, ಈ ಚಲನ ಚಿತ್ರಕ್ಕೆ ಪ್ರಶಸ್ತಿ ಕೂಡ ಬಂದಿರುತ್ತದೆ. ಸಂತೋಷ್ ತಾನೇ ಸ್ಥಾಪಿಸಿದ ಐನ್‍ಮನೆ ಫೌಂಡೇಶನ್‍ನಲ್ಲಿ ತನ್ನ ತಂಡದೊಂದಿಗೆ ‘ಪಲ್ಲಟ’ವೆಂಬ ಕನ್ನಡ ಸಾಮಾಜಿಕ ನಾಟಕದ ಮೂಲಕ ಹಿಂದುಳಿದ ವರ್ಗದ ಜೀತಪದ್ಧತಿಯ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎನ್ನುತ್ತಾರೆ. ಮುಂದೆ ಹಲವು ಚಲನ ಚಿತ್ರಗಳಲ್ಲಿ ನಟಿಸಲು ಅವಕಾಶ ಬರುತ್ತಿದ್ದು, ಯಾವದೇ ಪಾತ್ರಕ್ಕೂ ಸೈ ಎನ್ನುತ್ತಾರೆ ಯುವ ನಟ ಸಂತೋಷ್ ಮೇದಪ್ಪ. - ಪುತ್ತರಿರ ಕರುಣ್ ಕಾಳಯ್ಯ