ಮಡಿಕೇರಿ, ಮಾ.26 : ಸ್ತ್ರೀಶಕ್ತಿ ಗುಂಪುಗಳು ಉತ್ಪಾದಿಸಿದ ಉತ್ಪನ್ನ ಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಸ್ಥಳೀಯ ಸಂಸ್ಥೆಗಳು ಅಗತ್ಯ ಸಹಕಾರ ನೀಡುವಂತೆ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಸಲಹೆ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೊಡಗು ಜಿಲ್ಲೆಯ ವಿವಿಧ ಮಹಿಳಾ ಸಂಘ ಸಂಸ್ಥೆಗಳು ಮತ್ತು ಮಹಿಳಾ ಉದ್ಯಮಿಗಳಿಂದ ಮಾರುಕಟ್ಟೆ ನೆರವು ಯೋಜನೆಯಡಿ ಮೂರು ದಿನಗಳ ಕಾಲ ನಗರದ ಬಾಲಭವನದಲ್ಲಿ ಏರ್ಪಡಿಸಿರುವ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸ್ತ್ರೀಶಕ್ತಿ ಸಂಘಗಳು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಿದಲಿ,್ಲ ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಲಿದೆ. ಇದರಿಂದ ಸ್ತ್ರೀಶಕ್ತಿ ಸಂಘಗಳ ಬೆಳೆವಣಿಗೆಗೆ ಸಹಕಾರಿಯಾಗಲಿದೆ ಎಂದು ಟಿ.ಪಿ.ರಮೇಶ್ ಅವರು ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಅಭವೃದ್ಧಿ ಇಲಾಖೆಯ ಮಮ್ತಾಜ್ ಅವರು ಮಾತನಾಡಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಬಳಸಿಕೊಂಡು ಜೀವನ ಮಟ್ಟ ಉತ್ತಮ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಸ್ವಾವಲಂಬಿ ಬದುಕಿನಿಂದ ಸದೃಢ ಕುಟುಂಬ ಹಾಗೂ ಸಮಾಜ ನಿರ್ಮಾಣಕ್ಕೆ ಸಹಕಾರಿ. ಆದ್ದರಿಂದ ಪ್ರತಿಯೊಬ್ಬರೂ ಸ್ವಾವಲಂಬಿಯಾಗಿ ಬದುಕುವಂತಾಗಬೇಕು ಎಂದು ಅವರು ತಿಳಿಸಿದರು.
ಸ್ತ್ರೀಶಕ್ತಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರೆಹನಾ ಸುಲ್ತಾನ ಅವರು ಮಾತನಾಡಿ ಸ್ತ್ರೀ ಶಕ್ತಿ ಗುಂಪುಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯಲಿದ್ದು, ಅವುಗಳನ್ನು ಬಳಸಿಕೊಂಡು ಆರ್ಥಿಕ ಸಬಲತೆಯತ್ತ ಗಮನಹರಿಸಬೇಕು ಎಂದು ಅವರು ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸವಿತಾ, ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಕವಿತಾ ಇತರರು ಇದ್ದರು.