ಸೋಮವಾರಪೇಟೆ, ಮಾ. 26: ಸುಸಂಸ್ಕøತ ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದ್ದು, ಮಕ್ಕಳಿಗೆ ಸಂಸ್ಕಾರ ಕಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಡಿಯಿಡಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಅಭಿಪ್ರಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಮಹಿಳಾ ಘಟಕದ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಶ್ರೀಮಂತ ಸಂಸ್ಕøತಿಯ ದೇಶವಾಗಿದ್ದು, ಪೋಷಕರು ಎಳೆಯ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಮಾತನಾಡಿ, ರಾಜ್ಯದ ನಾಡು, ನುಡಿ, ನೆಲ, ಜಲದ ವಿಚಾರದಲ್ಲಿ ಕರವೇ ನಿರಂತರ ಹೋರಾಟ ಮಾಡುತ್ತಿದೆ ಎಂದರು.

ಕರವೇ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ತೊಟ್ಟಿಲು ತೂಗುತ್ತಿದ್ದ ಕೈಗಳು ಇಂದು ದೇಶವನ್ನೇ ಮುನ್ನಡೆಸುವ ಮಟ್ಟಕ್ಕೆ ಬೆಳೆದಿದೆ. ದೇಶದ ರಕ್ಷಣಾ ಮಂತ್ರಿಯಾಗಿ ಮಹಿಳೆಯೋರ್ವರು ಕಾರ್ಯರ್ನಿಹಿಸುತ್ತಿರುವದು ಹೆಮ್ಮೆಯ ವಿಚಾರ ಎಂದರು.

ಜಾನಪದ ಪರಿಷತ್ ತಾಲೂಕು ಕಾರ್ಯದರ್ಶಿ ವಿಜಯ್ ಹಾನಗಲ್ ಅವರು, ಮಹಿಳಾ ಕಾನೂನು, ಹಕ್ಕುಗಳ ಬಗ್ಗೆ ವಿವರಿಸಿದರಲ್ಲದೆ, ಸರ್ಕಾರದಿಂದ ನೀಡಲ್ಪಡುತ್ತಿರುವ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿಗಳಾದ ಸುನೀತಾ, ಶೈಲಾ ಉಪಸ್ಥಿತರಿದ್ದರು. ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಗಾಗಿ ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್, ಸೋಮವಾರಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಅಪ್ಸಾನಾ ಬೇಗಂ, ಸರ್ಕಾರಿ ಆಸ್ಪತ್ರೆಯ ಶುಶ್ರೂಷಕಿ ಮೀನಾಕ್ಷಿ, ಪ.ಪಂ. ಪೌರಕಾರ್ಮಿಕರಾದ ಕಾಳಮ್ಮ, ತಣ್ಣೀರುಹಳ್ಳದ ಅಂಗನವಾಡಿ ಕಾರ್ಯಕರ್ತೆ ಕುಸುಮ ಅವರುಗಳನ್ನು ಕರವೇ ವತಿಯಿಂದ ಸನ್ಮಾನಿಸಲಾಯಿತು.

ಸಾಹಿತ್ಯ ಘಟಕದ ಉಪಾಧ್ಯಕ್ಷೆ ಅನಿತಾ ಶುಭಾಕರ್, ಮಹಿಳಾ ಘಟಕದ ಪ್ರೇಮಾ ಯೋಗೇಶ್, ವಾಣಿ ಜೀವನ್, ಶೀಲಾ ವಿಜಯ್‍ಕುಮಾರ್, ಸುಮತಿ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ಕರವೇ ಸಾಹಿತ್ಯ ಘಟಕದ ಅಧ್ಯಕ್ಷ ಸುದರ್ಶನ್, ನ.ಲ. ವಿಜಯ, ಪುಟ್ಟಣ್ಣ ಆಚಾರ್ಯ, ಮಧುಕರ್ ಅವರುಗಳು ಕವನ ವಾಚಿಸಿದರು.