ಶ್ರೀ ಮುನೇಶ್ವರ ದೇವರ ವಾರ್ಷಿಕ ಮಹಾ ಪೂಜೋತ್ಸವ
ಸೋಮವಾರಪೇಟೆ: ಇಲ್ಲಿಗೆ ಸಮೀಪದ ಕುಸುಬೂರು-ಹಳ್ಳದಿಣ್ಣೆ ಗ್ರಾಮದ ಶ್ರೀ ಮುನೇಶ್ವರ ದೇವರ 35ನೇ ವರ್ಷದ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಮುನೇಶ್ವರ ದೇವರ ಗುಡಿಯಲ್ಲಿ ಬಸವಕುಮಾರ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಪೂಜೆಗಳು ನಡೆದವು. ನಂತರ ಕುಂಭ ಕಲಶದೊಂದಿಗೆ ಹೊರಟ ಮೆರವಣಿಗೆಯು ಸೊಪ್ಪಿನ ಬಸವಣ್ಣ ಗುಡಿಯ ಬಳಿ ತೆರಳಿ ಅಲ್ಲಿ ವಿಶೇಷ ಪೂಜೆ ನೆರವೇರಿತು. ಅಲ್ಲಿಂದ ಗುಳಿಗ ಹಾಗೂ ಚೌಡಮ್ಮ ದೇವರ ಗುಡಿಯಲ್ಲಿ ಪೂಜೆ ಸಲ್ಲಿಸಿ, ನಂತರ ಮುನೇಶ್ವರ ಗುಡಿಯ ಬಳಿ ಸಮಾಪನಗೊಂಡಿತು.
ಪೂಜೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುನೇಶ್ವರ ಸೇವಾ ಸಮಿತಿ ಅಧ್ಯಕ್ಷ ಬಿ.ಎ. ಭಾಸ್ಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ಬೇಳೂರು ಗ್ರಾ.ಪಂ. ಸದಸ್ಯರುಗಳಾದ ಮಂಜುಳಾ ಹರೀಶ್, ಶಶಿಕಲಾ, ಮೈಸೂರಿನ ಸಿ.ಕೆ. ಹರೀಶ್, ಪ್ರಮುಖರುಗಳಾದ ಬಿ.ಸಿ. ವಸಂತ ಪೂಜಾರಿ, ಗೋವಿನಮನೆ ಸುಬ್ಬಯ್ಯ, ಕರ್ಕಳ್ಳಿ ಶುಭಕರ್, ಹರಗ ಶಿವಯ್ಯ, ಪದ್ಮಾವತಿ, ಸಿ.ಕೆ. ರುಕ್ಮಿಣಿ, ದೇವಾಲಯ ಸಮಿತಿ ಗೌರವಾಧ್ಯಕ್ಷ ಹೆಚ್.ಕೆ. ಶಶಿಕುಮಾರ್, ಉಪಾಧ್ಯಕ್ಷೆ ಭಾಗೀರಥಿ, ಕಾರ್ಯದರ್ಶಿ ಸುಂದರ್, ಖಜಾಂಚಿ ಸುಭಾಷ್ ಉಪಸ್ಥಿತರಿದ್ದರು. ಮುನೇಶ್ವರ ಗುಡಿಯಲ್ಲಿ ವಿವಿಧ ಅರ್ಚನೆ, ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣಾ ಕಾರ್ಯ ನೆರವೇರಿತು.
ಜೀರ್ಣೋದ್ಧಾರಕ್ಕೆ ಅನುದಾನ
ಸುಂಟಿಕೊಪ್ಪ: ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಯ ಮಳ್ಳೂರು ಶ್ರೀ ಕುರುಂಬ ಭಗವತಿ ವಿಷ್ಣುಮಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇತ್ರದಿಂದ ಬಿಡುಗಡೆಯಾದ ರೂ 50,000 ಅನುದಾನವನ್ನು ಸೋಮವಾರಪೇಟೆ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ವೈ. ಪ್ರಕಾಶ್ ದೇವಸ್ಥಾನದ ಪ್ರಧಾನ ಆರ್ಚಕ ಶಿವದಾಸ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಕಾನ್ಬೈಲ್ ಒಕ್ಕೂಟದ ಸೇವಾ ಪ್ರತಿನಿಧಿಯಾದ ಶಿವಕುಮಾರ್ ಹಾಗೂ ಸ್ವ ಸಹಾಯ ಸಂಘದ ಪದಾಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು.