ಶ್ರೀಮಂಗಲ, ಮಾ. 26: ಮುಂಬರುವ ವಿಧಾನ ಸಭೆ ಚುನಾವಣೆ ಸೇರಿದಂತೆ ಭವಿಷ್ಯದಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ಮತದಾನದ ಹಕ್ಕು ಹೊಂದಿರುವ ಪಕ್ಷದ ಸಕ್ರಿಯ ಕಾರ್ಯಕರ್ತ ಮತ್ತು ಮುಖಂಡರಿಗೆ ಬಿಜೆಪಿ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಹಕ್ಕೋತ್ತಾಯ ಬಗ್ಗೆ ಬಿರುನಾಣಿ ವ್ಯಾಪ್ತಿಯ ಪಕ್ಷದ ಪ್ರಮುಖರು ಪುನರುಚ್ಚರಿಸಿದ್ದಾರೆ.ಮಡಿಕೇರಿ ತಾಲೂಕಿನ ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಅವರು ವೀರಾಜಪೇಟೆ ತಾಲೂಕಿಗೆ ಪ್ರಾತಿನಿಧ್ಯದ ಬಗ್ಗೆ ನೀಡಿರುವ ಹೇಳಿಕೆಗೆ ಬಿರುನಾಣಿ ವ್ಯಾಪ್ತಿಯ ಪಕ್ಷದ ಪ್ರಮುಖರು ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿರುನಾಣಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಪ್ರಮುಖರು ಕಿಡಿಕಾರಿದ್ದಾರೆ.ವೀರಾಜಪೇಟೆ ಕ್ಷೇತ್ರದಲ್ಲಿ ಕೊಡವರಿಗೆ ಪ್ರಾತಿನಿಧ್ಯ ನೀಡಬೇಕೆಂದು ಎಲ್ಲೂ ಹೇಳಿಲ್ಲ. ಆದರೆ, ಕಳೆದ 65 ವರ್ಷದಿಂದ ವೀರಾಜಪೇಟೆ ತಾಲೂಕು ಮೀಸಲಾತಿ ಕ್ಷೇತ್ರವಾಗಿ ಸ್ಥಳೀಯರಿಗೆ ಶಾಸಕರಾಗುವ ಅವಕಾಶ ವಂಚಿತರಾಗುವಂತೆ ಆಯಿತು. ತದ ನಂತರ 2008ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ರೂಪುಗೊಂಡರೂ ಹೊರಗಿನವರು ಕ್ಷೇತ್ರದಲ್ಲಿ ಶಾಸಕರಾಗುವ ಮೂಲಕ ಸ್ಥಳೀಯರಿಗೆ ಶಾಸಕರಾಗುವ ಅರ್ಹತೆಯನ್ನೇ ಪ್ರಶ್ನಿಸಿದಂತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವೀರಾಜಪೇಟೆಯಿಂದ ಆಯ್ಕೆ ಯಾದ ಎ.ಪಿ. ಅಪ್ಪಣ್ಣ, ಎ.ಎಂ. ಬೆಳ್ಯಪ್ಪ ಅವರುಗಳು ಬಿಜೆಪಿ ಪಕ್ಷದಿಂದ ಆಯ್ಕೆ ಆದವರಲ್ಲ. ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಅವರು ಮೂರು ಅವಧಿಗೆ ಮುಂದುವರೆದಿರುವ ಗುಟ್ಟೇನು.? ಇವರು ಸಹ ತಮ್ಮ ಅಧಿಕಾರವನ್ನು ಬೇರೆ ಹೊಸ ಮುಖಕ್ಕೆ ಅವಕಾಶ ನೀಡದೆ ಅಧಿಕಾರಕ್ಕೆ ಅಂಟಿ ಕೊಂಡಿದ್ದಾರೆ ಎಂದರು.

ಪಕ್ಷದಲ್ಲಿ ಯಾರು ಬೇಕಾದರೂ ಶಾಸಕರಾಗಲು ಟಿಕೆಟ್ ಬಯಸುವದರಲ್ಲಿ ತಪ್ಪಿಲ್ಲ. ಆದರೆ, ಟಿಕೆಟ್ ಕೇಳುವದೇ ದೊಡ್ಡ ಅಪರಾಧ ಎಂಬಂತೆ ಪಕ್ಷದಲ್ಲಿ ಅಧಿಕಾರಕ್ಕಾಗಿ ಅಂಟಿಕೊಂಡಿರುವ ಕೆಲವರು ಸರ್ವಾಧಿಕಾರ ಧೋರಣೆ ಖಂಡನೀಯ ಎಂದು ಆಕ್ರೋಶ ವ್ಯಕ್ತವಾಯಿತು.

ಸಭೆಯಲ್ಲಿ ಬಿರುನಾಣಿ ಗ್ರಾ.ಪಂ ಸದಸ್ಯ ಕಾಯಪಂಡ ಸುನಿಲ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕುಪ್ಪಣಮಾಡ ರಮೇಶ್ ಮುದ್ದಪ್ಪ, ಮಾಜಿ ನಿರ್ದೇಶಕ ಕರ್ತಮಾಡ ಮಿಲನ್ ಮಾದಪ್ಪ,

(ಮೊದಲ ಪುಟದಿಂದ) ಬಿಜೆಪಿ ಸ್ಥಾನಿಯ ಸಮಿತಿ ಮಾಜಿ ಕಾರ್ಯದರ್ಶಿಗಳಾದ ಕೀಕಣಮಾಡ ಮನು ಕಾರ್ಯಪ್ಪ, ಬಲ್ಯಮಿದೇರಿರ ಸುರೇಶ್, ಕಾರ್ಯ ಕರ್ತರಾದ ಗುಡ್ಡಮಾಡ ಪ್ರವೀಣ್, ಬೊಟ್ಟಂಗಡ ಶ್ಯಾಂ, ಕಳಕಂಡ ರಾಜ, ಕಾಳಿಮಾಡ ಪವನ್, ರಾಯ್, ಕಳಕಂಡ ನಾಚಪ್ಪ, ಕರ್ತಮಾಡ ಜಯು, ಮಾಜಿ ಸೈನಿಕರಾದ ಕರ್ತಮಾಡ ನಾಣಯ್ಯ, ಕಳಕಂಡ ರಾಮುು ಮುಂತಾದವರು ಹಾಜರಿದ್ದರು.