ಶ್ರೀಮಂಗಲ, ಮಾ. 26: ರೈಲ್ವೆ ಯೋಜನೆ ವಿರೋಧಿಸುವ ನಿಟ್ಟಿನಲ್ಲಿ ದೆಹಲಿಗೆ ತೆರಳಿದ ಜಿಲ್ಲೆಯ ನಿಯೋಗವೊಂದು ಕಸ್ತೂರಿ ರಂಗನ್ ಮತ್ತು ಸೂಕ್ಷ್ಮ ಪರಿಸರ ತಾಣ ಯೋಜನೆಗಳನ್ನು ಅನುಷ್ಠಾನ ಮಾಡಲು ನೀಡಿದ ಮನವಿಗೂ ಕೊಡಗು ರೈಲ್ವೆ ವಿರೋಧಿ ಹೋರಾಟ ವೇದಿಕೆಗೂ ಯಾವದೇ ಸಂಬಂಧವಿಲ್ಲ ಎಂದು ವೇದಿಕೆಯ ಸಂಚಾಲಕ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಸ್ಪಷ್ಟ ಪಡಿಸಿದ್ದಾರೆ.

ಈ ಬಗ್ಗೆ ಲಿಖಿತ ಪತ್ರಿಕೆ ಹೇಳಿಕೆ ನೀಡಿರುವ ಅವರು ಜಿಲ್ಲೆಗೆ ಮಾರಕ ವಾಗುವ ರೈಲ್ವೆ ಯೋಜನೆಯನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳ ಗಮನ ಸೆಳೆಯಲು ಫೆ. 18 ರಂದು ಮೈಸೂರಿನಲ್ಲಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ರೈಲ್ವೆ ಯೋಜನೆಯನ್ನು ತಡೆಗಟ್ಟುವ ಒಂದು ವಿಚಾರ ಬಿಟ್ಟು ಬೇರೆ ಯಾವದೇ ಬೇಡಿಕೆ ಸೇರಿಲ್ಲ. ಆದರೆ, ಜಿಲ್ಲೆಗೆ ಹಾಗೂ ಜಿಲ್ಲೆಯ ಮೂಲ ನಿವಾಸಿಗಳಿಗೆ ಮಾರಕವಾಗುವ ಯಾವದೇ ಯೋಜನೆಗಳ ಜಾರಿಗೆ ಮತ್ತು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲಾಗುವದು ಎಂದು ಅವರು ತಿಳಿಸಿದ್ದಾರೆ.

ದೆಹಲಿಗೆ ತೆರಳಿದ ನಿಯೋಗವೊಂದು ರೈಲ್ವೆ ಸಚಿವ ಪಿಯೂಷ್ ಗೋಯಾಲ್ ಅವರನ್ನು ಭೇಟಿ ಮಾಡಿ ಕಸ್ತೂರಿ ರಂಗನ್ ಹಾಗೂ ಸೂಕ್ಷ್ಮ ಪರಿಸರ ತಾಣ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಮನವಿ ಸಲ್ಲಿಸಿರುವ ಬಗ್ಗೆ ತಮ್ಮ ವೇದಿಕೆಯೊಂದಿಗೆ ಚರ್ಚೆ ನಡೆಸಿಲ್ಲ, ಹಾಗೂ ಯಾವದೇ ಸಂಪರ್ಕವನ್ನು ಮಾಡಿಲ್ಲ. ಈ ಯೋಜನೆ ಅರಣ್ಯ ಪ್ರದೇಶಕ್ಕೆ ಹೊರತುಪಡಿಸಿ ಖಾಸಗಿ ಜಾಗದಲ್ಲಿ ಜಾರಿಗೊಳಿಸಲು ಸಹಮತವಿಲ್ಲ ಎಂದು ರಾಜೀವ್ ಬೋಪಯ್ಯ ತಿಳಿಸಿದ್ದಾರೆ.