ಮಡಿಕೇರಿ, ಮಾ. 26 : ಚುನಾವಣೆಯನ್ನು ಕಾರಣವಾಗಿಟ್ಟುಕೊಂಡು ಹೋಂಸ್ಟೇಗಳಲ್ಲಿ ಮದ್ಯ ಮಾರಾಟ ವಿತರಿಸುವದು ಅಥವಾ ಪ್ರವಾಸಿಗರು ಮದ್ಯ ಸೇವಿಸುವದು ಕಂಡು ಬಂದಲ್ಲಿ ಅಂಥ ಹೋಂಸ್ಟೇ ಮಾಲೀಕರನ್ನು ಜಾಮೀನು ರಹಿತವಾಗಿ ಬಂಧಿಸಲಾಗುವದೆಂದು ಕುಶಾಲನಗರ ಡಿವೈಎಸ್‍ಪಿ ಅವರು ನೀಡಿರುವ ಹೇಳಿಕೆ ಖಂಡನೀಯವೆಂದು ಕೊಡಗು ಟೂರಿಸಂ ಅಸೋಸಿಯೇಷನ್ ಅಸಮಾಧಾನ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಮಾದೇಟಿರ ತಿಮ್ಮಯ್ಯ ಚುನಾವಣೆಯನ್ನು ನೆಪವಾಗಿಸಿಕೊಂಡು ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ ಸಂಘ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರವಾಸಿಗರು ತಾವಾಗಿ ಮದ್ಯವನ್ನು ಖರೀದಿಸಿ ತಂದು ಮದ್ಯಪಾನ ಮಾಡುತ್ತಾರೆ. ಇದನ್ನು ತಡೆಯಲು ಹೇಗೆ ಸಾಧ್ಯ ಮತ್ತು ಮಾಲೀಕರು ಹೊಣೆ ಎಂದು ಕಠಿಣ ಶಿಕ್ಷೆಗೆ ಗುರಿ ಪಡಿಸುವದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕೊಡಗಿನ ಸಂಸ್ಕøತಿಯ ಬಗ್ಗೆ ಅಧಿಕಾರಿಗಳು ಮೊದಲು ಅರಿತುಕೊಳ್ಳಬೇಕೆಂದ ಮಾದೇಟಿರ ತಿಮ್ಮಯ್ಯ ಡಿವೈಎಸ್‍ಪಿ ಅವರ ಹೇಳಿಕೆ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಚರ್ಚಿಸುವದಾಗಿ ತಿಳಿಸಿದರು.

ಹೋಂಸ್ಟೇ ನಿಯಮಗಳನ್ನು ಸಮರ್ಪಕವಾಗಿ ರೂಪಿಸದ ಸರ್ಕಾರ ವಿನಾಕಾರಣ ಅಧಿಕಾರಿಗಳ ಮೂಲಕ ಧಾಳಿ ನಡೆಸುತ್ತಿದೆ. ಹೋಂಸ್ಟೇಗಳ ಮೇಲಿನ ಧಾಳಿಯನ್ನು ತೀವ್ರವಾಗಿ ಖಂಡಿಸುವದಾಗಿ ತಿಳಿಸಿದ ಅವರು ಅನಧಿಕೃತ ಹೋಂಸ್ಟೇಗಳಿಗೆ ಸಂಘದ ಬೆಂಬಲವಿಲ್ಲವೆಂದು ಸ್ಪಷ್ಟಪಡಿಸಿದರು. ಜಿಲ್ಲೆಯ ಯುವ ಸಮೂಹ ಪ್ರವಾಸೋದ್ಯಮವನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿದ್ದು, ಕೊಡಗಿಗೆ ಹೊಂದಿಕೆಯಾಗುವಂತಹ ಹೋಂಸ್ಟೇ ನಿಯಮವನ್ನು ಸರ್ಕಾರ ಜಾರಿಗೆ ತರಬೇಕು. ಅಧಿಕಾರಿಗಳು ಹೋಂಸ್ಟೇಗಳ ಮೇಲಿನ ಧಾಳಿಯನ್ನು ಸ್ಥಗಿತಗೊಳಿಸಬೇಕೆಂದು ತಿಮ್ಮಯ್ಯ ಒತ್ತಾಯಿಸಿದರು.

ಸಂಘದ ಪದಾಧಿಕಾರಿ ಇಬ್ರಾಹಿಂ ಮಾತನಾಡಿ ಹೋಂಸ್ಟೇಗಳನ್ನು ಅಧಿಕೃತಗೊಳಿಸಲು ಇಲಾಖೆಗೆ ನೀಡಿದ 500 ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸದ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿ ಕಿಶನ್ ತಿಮ್ಮಯ್ಯ ಉಪಸ್ಥಿತರಿದ್ದರು.