ಸೋಮವಾರಪೇಟೆ, ಮಾ. 27: ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಏ.8ರಂದು ಸಮಾಜ ಬಾಂಧವರಿಗೆ ಮಾದಾಪುರದ ಡಿ. ಚೆನ್ನಮ್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಹೆಚ್.ಎಂ. ಪೂವಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.8ರಂದು ಪೂರ್ವಾಹ್ನ 9.30ರಿಂದ ಕ್ರೀಡಾಕೂಟ ಗಳು ನಡೆಯಲಿವೆ. ಪುರುಷರಿಗೆ ಕ್ರಿಕೆಟ್, ಫುಟ್ಬಾಲ್, ಕಬಡ್ಡಿ, ವಾಲಿಬಾಲ್, 100/ 200ಮೀಟರ್ ಓಟ, ಮಹಿಳೆಯರಿಗೆ 50 ಮೀಟರ್ ಓಟ, ಬಲೂನು ಒಡೆಯುವದು, ನಿಂಬೆ ಚಮಚ ಓಟ, ನೀರು ತುಂಬುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಇದರೊಂದಿಗೆ ಮಕ್ಕಳಿಗೆ ಕಪ್ಪೆ ಓಟ, ಕಾಳು ಹೆಕ್ಕುವ ಸ್ಪರ್ಧೆ ನಡೆಯಲಿದೆ. ಭಾಗವಹಿಸುವ ಸ್ಪರ್ಧಾಳುಗಳು ಮಾ.30ರ ಒಳಗೆ ಹೆಸರು ನೋಂದಾಯಿಕೊಳ್ಳಬೇಕು ಎಂದು ಪೂವಪ್ಪ ತಿಳಿಸಿದರು.
ಏ.16ರಂದು ಸೋಮವಾರ ಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಆದಿ ದ್ರಾವಿಡ ಸಮಾಜದ ಪ್ರಥಮ ವಾರ್ಷಿಕೋತ್ಸವ ಹಾಗೂ ಜನಾಂದೋಲನಾ ಸಮಾವೇಶ ನಡೆಯಲಿದ್ದು, ಕ್ರೀಡಾಕೂಟದ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವದು ಎಂದು ಅವರು ಮಾಹಿತಿ ನೀಡಿದರು.
ಕೊಡಗಿನಲ್ಲಿ ನೆಲೆಸಿರುವ ಆದಿ ದ್ರಾವಿಡ ಸಮಾಜ ಬಾಂಧವರಿಗೆ ಪಾಲೆ, ಎಡಗೈ, ಬಲಗೈ, ಆದಿಕರ್ನಾಟಕ ಎಂಬ ಹೆಸರಿನಲ್ಲಿ ಜಾತಿ ದೃಡೀಕರಣ ಪತ್ರ ನೀಡಲಾಗುತ್ತಿದ್ದು, ಇದರಿಂದ ಸಮಸ್ಯೆಯಾಗಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಮೇರೆ ಆದಿ ದ್ರಾವಿಡ ಹೆಸರಿನಲ್ಲಿ ದೃಡೀಕರಣ ಪತ್ರ ನೀಡುವಂತೆ ತಾಲೂಕು ತಹಸೀಲ್ದಾರ್‍ಗೆ ಆದೇಶ ಮಾಡಿದ್ದರೂ, ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿದ ಪೂವಪ್ಪ, ಇದೇ ಕ್ರಮ ಮುಂದುವರೆದರೆ ಮುಂದಿನ ದಿನಗಳಲ್ಲಿ ಸಮಾಜ ಬಾಂಧವರನ್ನು ಒಟ್ಟುಗೂಡಿಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.