ಮಡಿಕೇರಿ, ಮಾ. 27: ಮರಗೋಡು. “ ಪ್ರವಾಹಗಳು ಎದುರಾದರೂ ದೊಡ್ಡ ಬಂಡೆಗಳು ಕೊಚ್ಚಿಕೊಂಡು ಹೋಗದೆ ಸ್ಥಿರವಾಗಿ ನಿಂತಿರುವಂತೆ ಕನ್ನಡ ಭಾಷೆಯು ಕೂಡಾ ಈಗ ಎದುರಾಗುತ್ತಿರುವ ಅನ್ಯ ಭಾಷೆಗಳೆಂಬ ಪ್ರವಾಹಕ್ಕೆ ಎದುರಾಗಿ ಸ್ಥಿರವಾಗಿ ನಿಲ್ಲಲಿದೆ” ಎಂದು ಮರಗೋಡು ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಕನ್ನಡ ಶಿಕ್ಷಕ ಪಿ.ಎಸ್ ರವಿಕೃಷ್ಣ ಅಭಿಪ್ರಾಯ ಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕ ವತಿಯಿಂದ ಮರಗೋಡು ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿ ನಲ್ಲಿ ಜರುಗಿದ ಎನ್ ಮಹಾಬಲೇಶ್ವರ ಭಟ್ ದತ್ತಿನಿಧಿ ಉಪನ್ಯಾಸ ಹಾಗೂ ಕನ್ನಡ ಸಾಹಿತ್ಯಪರಿಷತ್‍ನಿಂದ ಶಾಲೆಗೆ ಉಚಿತ ಪುಸ್ತಕಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ‘ಕನ್ನಡದ ಏಳು-ಬೀಳು’ ಕುರಿತಾದ ಉಪನ್ಯಾಸ ನೀಡುತ್ತಾ ಮಾತನಾಡಿ ದರು. ಚಕ್ರವರ್ತಿ ಅಶೋಕನ ಕಾಲದಿಂದಲೂ ಕನ್ನಡದ ಕುರಿತ ಕುರುಹುಗಳು ಕಂಡು ಬರುತ್ತಿದ್ದರೂ ಈ ಭಾಷೆಯ ಕುರಿತ ಸ್ಪಷ್ಟ ಚಿತ್ರಣ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಾಳಗುಂದ ಶಾಸನದಲ್ಲಿ ಕಂಡು ಬರುತ್ತದೆ. ಅದುವೇ ಕನ್ನಡಿಗರ ಮೂಲ ಸ್ಥಳವೆಂಬ ನಿರ್ಣಯಕ್ಕೆ ವಿದ್ವಾಂಸರು ಬಂದಿದ್ದಾರೆ. ರಾಜಾಶ್ರಯದಿಂದ ಸಮೃದ್ಧಿಯಾಗಿ ಬೆಳೆದ ಕನ್ನಡಕ್ಕೆ 12 ನೇ ಶತಮಾನದ ಹೊತ್ತಿಗೆ ಸಂಸ್ಕøತದ ಪ್ರಭಾವ ವಿಪರೀತವಾಗಿತ್ತು. ಇದನ್ನು ನಯಸೇನನೆಂಬ ಕವಿಯು ಖಂಡಿಸುತ್ತಾ “ತಕ್ಕುದೆ ಬೆರೆಸಲ್ಕೆ ಘೃತಮುಮಂ-ತೈಲಮುಮಂ” ಎನ್ನುತ್ತಾ ಸಂಸ್ಕøತ ಮತ್ತು ಕನ್ನಡ ಭಾಷೆಗಳ ಬೆರಕೆ ಮಾಡಬೇಡಿ.ಅದು ಅಸ್ವಾದವಾಗುತ್ತದೆ ಎಂದನು. ಆ ಬಳಿಕದ ನಡುಗನ್ನಡದ ಕವಿಗಳೆಲ್ಲರೂ ಕನ್ನಡವನ್ನೇ ವ್ಯಾಪಕವಾಗಿ ಬಳಸಿದ್ದರ ಪರಿಣಾಮವಾಗಿ 17 ನೇ ಶತಮಾನದ ಕವಿ ಮಹಾಲಿಂಗರಂಗನು “ಸುಲಿದ ಬಾಳೆಯ ಹಣ್ಣಿನಂದದಿ, ಅಳಿದ ಉಷ್ಣದ ಹಾಲಿನಂದದಿ, ಕಳಿದ ಸಿಗುರಿನ ಕಬ್ಬಿನಂದದಿ” ಎನ್ನುತ್ತಾ ಕನ್ನಡವು ಅಷ್ಟೂ ಸುಲಭ ,ಸುಲಲಿತ ಭಾಷೆ ಎಂದನು. ಇವುಗಳು ಇಂದಿನ ನಮ್ಮ ಸ್ಥಿತಿಯನ್ನು ಎಚ್ಚರಿಸುವಂತಿದೆ ಎಂದು ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡುತ್ತಾ ಪರಿಷತ್ತು ಸ್ಥಳೀಯ ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಹುತೇಕ ಕೊಡಗಿನ ಸಾಹಿತಿಗಳಿಂದ ರಚಿತವಾದ ಕೃತಿಗಳನ್ನು ವಿದ್ಯಾ ಸಂಸ್ಥೆಗಳಿಗೆ ಉಚಿತವಾಗಿ ನೀಡುವ ಯೋಜನೆ ಹಾಕಿಕೊಂಡಿದೆ, ಆ ಮೂಲಕ ಶಾಲಾ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ಮರಗೋಡಿನ ಭಾರತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ವಾಸಯ್ಯ ಅವರಿಗೆ ಉಚಿತ ಕೃತಿಗಳನ್ನು ಹಸ್ತಾಂತರಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಎಂ.ಪಿ. ವೀಣಾ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಪಿ.ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ವೆಂಕಟೇಶ್ ನಾಯಕ್ ಸ್ವಾಗತಿಸಿ, ಬಿ.ಬಿ. ಪೂರ್ಣಿಮಾ ನಿರೂಪಿಸಿ, ವಂದಿಸಿದರು.