ಸೋಮವಾರಪೇಟೆ, ಮಾ. 27: 10 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ತಳ್ಳಿ ಗಿರಿಜನರ ಹಾಡಿಯ ಕಾಂಕ್ರಿಟ್ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ಭೇಟಿ ನೀಡಿ, ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಎಸ್ಟಿಪಿ ಯೋಜನೆಯಡಿ 10ಲಕ್ಷ ರೂ. ಅನುದಾನದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿ ಅಂದಾಜುಪಟ್ಟಿಯಂತೆ ನಡೆಯುತ್ತಿಲ್ಲ. ಆರು ಇಂಚಿನಷ್ಟು ವೆಟ್ಮಿಕ್ಸ್ ಹಾಕಿ ರೋಲ್ ಮಾಡಿದ ನಂತರ ಕಾಂಕ್ರೀಟ್ ಹಾಕಬೇಕಿದ್ದರೂ ಸಹ ಗುತ್ತಿಗೆದಾರ ಕಳಪೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಬಗ್ಗನ ಅನಿಲ್, ಗ್ರಾಮಸ್ಥರಾದ ಕೆ.ಪಿ.ರಾಯ್, ಚಂದ್ರು, ಮಚ್ಚಂಡ ಅಶೋಕ್ ಸೇರಿದಂತೆ ಇತರರು ಆರೋಪಿಸಿದರು.
ವೆಟ್ಮಿಕ್ಸ್ ಬದಲಿಗೆ ತಳಭಾಗದಲ್ಲಿ ಕಲ್ಲುಪುಡಿ ಹಾಕಿ ಅದರ ಮೇಲೆ ಕಾಂಕ್ರೀಟ್ ಹಾಕುತ್ತಿದ್ದಾರೆ. ಕಾಮಗಾರಿ ಕಳಪೆಯಾಗುತ್ತಿದ್ದರೂ ಸಂಬಂಧಿಸಿದ ಇಂಜಿನಿಯರ್ ಗಮನ ಹರಿಸುತ್ತಿಲ್ಲ. ಗುತ್ತಿಗೆದಾರರಿಂದ ನಿಯೋಜಿತರಾಗುವ ಮೇಸ್ತ್ರಿ ಎಲ್ಲವನ್ನೂ ಮಾಡುತ್ತಿದ್ದಾನೆ. ಇಂತಹ ಸನ್ನಿವೇಶದಲ್ಲಿ ಅಭಿಯಂತರರು ಯಾಕೆ ಬೇಕು? ಅವರಿಗೆ ಸರ್ಕಾರಿ ಸಂಬಳವೇಕೆ? ಎಂದು ಎಇಇ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕಾಂಕ್ರೀಟ್ ರಸ್ತೆಯನ್ನು ಪರಿಶೀಲಿಸಿದ ಅಭಿಯಂತರ ಮಹೇಂದ್ರ ಕುಮಾರ್ ಅವರು, ಅಂದಾಜು ಪಟ್ಟಿಯಂತೆ ಕಾಮಗಾರಿಯನ್ನು ನಿರ್ವಹಿಸಿಲ್ಲದ ಕಾರಣ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಅಂದಾಜುಪಟ್ಟಿಯಂತೆ ವೆಟ್ಮಿಕ್ಸ್ ಹಾಕಿ ರೋಲ್ ಮಾಡಿದ ನಂತರ ಕಾಂಕೀಟ್ ಹಾಕುವಂತೆ ಗುತ್ತಿಗೆದಾರ ಮಾದಪ್ಪ ಅವರಿಗೆ ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್, ತಾಲೂಕಿನಲ್ಲಿ 4 ಕೋಟಿ ರೂ. ಅನುದಾನದಲ್ಲಿ ಎಸ್ಟಿಪಿ ಮತ್ತು ಎಸ್ಸಿಪಿ ಕಾಮಗಾರಿಗಳು ನಡೆದಿದ್ದು, ಇದರಲ್ಲಿ 3.50 ಕೋಟಿ ರೂ. ವೆಚ್ಚದ ಕಾಮಗಾರಿಗಳು ಕಳಪೆಯಾಗಿವೆ. ಈ ಬಗ್ಗೆ ಅಭಿಯಂತರರು ಯಾವದೇ ಗಮನ ಹರಿಸುತ್ತಿಲ್ಲ. ಸರ್ಕಾರಿ ಹಣವನ್ನು ಕಳಪೆ ಕಾಮಗಾರಿ ಮೂಲಕ ಲೂಟಿ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರೊಂದಿಗೆ ಇಂಜಿನಿಯರ್ಗಳೇ ಶಾಮೀಲಾಗಿ ಸರ್ಕಾರದ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಸರ್ಕಾರದ ಹಣ ಪೋಲಾಗದಂತೆ ತಡೆಯಲು ಸಾರ್ವಜನಿಕರು ಇನ್ನಷ್ಟು ಜಾಗೃತರಾಗಬೇಕು ಎಂದು ಅಭಿಪ್ರಾಯಿಸಿದರು.