ಮಡಿಕೇರಿ, ಮಾ.27 : ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಆಡಳಿತ ವೈಖರಿ ದುಡಿಯುವ ವರ್ಗದ ಮೇಲಿನ ಧಾಳಿಯಂತಿದೆ ಎಂದು ಆರೋಪಿಸಿ ರುವ ಯುನೈಟೆಡ್ ಪ್ಲಾಂಟರ್ಸ್ ವರ್ಕರ್ಸ್ ಯೂನಿಯನ್‍ನ ಪ್ರಧಾನ ಕಾರ್ಯದರ್ಶಿ ಕೆ. ಗುಣಶೇಖರ್, ಮುಂಬರುವ ಚುನಾವಣೆಯಲ್ಲಿ ಸಂವಿಧಾನದ ಮೇಲೆ ಬದ್ಧತೆ ಇರುವ ಮತ್ತು ಜಾತ್ಯತೀತ ವಾದದ ಪಕ್ಷಗಳಿಗೆ ನಮ್ಮ ಸಂಘÀಟನೆ ಬೆಂಬಲ ಸೂಚಿಸಲಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೂತನ ಕಾರ್ಮಿಕ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದು, ಇದು ಜಾರಿಯಾದರೆ ಶೇ.80 ರಷ್ಟು ಕಾರ್ಮಿಕರು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. ಫಿಕ್ಸ್ಡ್ ಅಂಪ್ಲಾಯ್‍ಮೆಂಟ್ ಆಕ್ಟ್ ದುಡಿಯುವ ವರ್ಗವನ್ನು ಬೀದಿ ಪಾಲು ಮಾಡುವ ಕಾಯ್ದೆಯಾಗಿದ್ದು, ಇದನ್ನು ಕೈಬಿಡಬೇಕೆಂದು ಅವರು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಹಲವು ನಿರ್ಧಾರಗಳಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆಯೇ ಹೊರತು ಯಾವದೇ ಸುಧಾರಣೆಯಾಗಿಲ್ಲ. ಹಣಕಾಸಿನ ಚಲಾವಣೆ ಸ್ಥಗಿತಗೊಂಡಿದ್ದು, ಸಣ್ಣ ಕೈಗಾರಿಕೋದ್ಯಮಿಗಳು ಮತ್ತು ವರ್ತಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೈಗಾರಿಕಾ ಘಟಕಗಳು ಮುಚ್ಚಲ್ಪಟ್ಟಿರುವದರಿಂದ ಕಾರ್ಮಿಕರು ಬೀದಿ ಪಾಲಾಗಿದ್ದಾರೆ ಎಂದು ಗುಣಶೇಖರ್ ಆರೋಪಿಸಿದರು.
ಮಹದೇವು ವಿರುದ್ಧ ಆರೋಪ
ಸಿಐಟಿಯು ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಮಹದೇವು ಎಂಬವರು ಕಾರ್ಮಿಕ ವರ್ಗದಿಂದ ಹಣ ವಸೂಲಿ ಮಾಡುತ್ತಿದ್ದು, ಯಾವದೇ ರಶೀದಿ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಎಐಟಿಯುಸಿ ಸಂಘಟನೆ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಈ ವ್ಯಕ್ತಿ ಕಾರ್ಮಿಕ ವರ್ಗದ ಹಾದಿ ತಪ್ಪಿಸುತ್ತಿದ್ದಾರೆ. ಸಿಐಟಿಯು ಮುಖಂಡರು ಮಹದೇವು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ಮಾತನಾಡಿ, ಮಹದೇವ್ ಅವರಿಗೆ ಸಿಐಟಿಯುನಲ್ಲಿ ಯಾವದೇ ಸ್ಥಾನಮಾನವಿಲ್ಲ. ಆದರೂ ಕಾರ್ಮಿಕರಿಗೆ ಕನಿಷ್ಟ ವೇತನ ನಿಗಧಿ ಮಾಡಲು ಹಣ ನೀಡಬೇಕಾಗುತ್ತದೆ ಎಂದು ಕಾರ್ಮಿಕರ ಹಾದಿ ತಪ್ಪಿಸಿ ವಸೂಲಿಯಲ್ಲಿ ತೊಡಗಿರುವ ಇವರÀ ವಿರುದ್ಧ ಸಿಐಟಿಯು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ದುಡಿಯುವ ವರ್ಗಕ್ಕೆ ಕಳಂಕ ತರುತ್ತಿರುವ ಈ ವ್ಯಕ್ತಿಯ ವಿರುದ್ಧ ಸಿಐಟಿಯು ಮುಖಂಡರಿಗೆ ಪತ್ರ ಬರೆದಿದ್ದರು ಯಾವದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎನ್. ಮಣಿ ಉಪಸ್ಥಿತರಿದ್ದರು.