ಮೂರ್ನಾಡು, ಮಾ. 27 : ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದ ವ್ಯಕ್ತಿ ಕಾವೇರಿ ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆಗೈದು ಹೊಳೆಗೆ ಎಸೆಯಲಾಗಿದೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ.

ಮೇಕೇರಿ ಶಕ್ತಿ ನಗರದ ನಿವಾಸಿ ಎನ್.ಸಿ. ಗಣೇಶ್(35) ಮೃತದೇಹ ಕೋಡಂಬೂರು ಹೊಳ್ಳೆತೋಡು ಬಳಿ ಕಾವೇರಿ ಹೊಳೆಯಲ್ಲಿ ತೇಲುವ ಸ್ಥಿತಿಯಲ್ಲಿ ಮಂಗಳವಾರ ಬೆಳಿಗ್ಗೆ ಪತ್ತೆ ಆಗಿದೆ. ಮೃತ ವ್ಯಕ್ತಿ ಬಲಮುರಿ ಗ್ರಾಮದ ಚಂಗಂಡ ಸೂರಜ್ ಎಂಬವರ ಟಿಪ್ಪರ್ ಚಾಲಕನಾಗಿದ್ದು, ಕಳೆದ ಐದು ವರ್ಷದಿಂದ ಚಾಲಕ ವೃತ್ತಿ ನಿರ್ವಹಿಸುತ್ತಿದ್ದ. ಕಳೆದ ಶನಿವಾರದಿಂದ ಗಣೇಶ್ ನಾಪತ್ತೆ ಆಗಿದ್ದು, ಮಾಲೀಕ ಸೂರಜ್ ತಾ.26 ರಂದು ಗಣೇಶ್ ತಾಯಿಯನ್ನು ಕರೆದುಕೊಂಡು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮಗ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು.

ಮಂಗಳವಾರ ಬೆಳಿಗ್ಗೆ ಗಣೇಶ್ ಮೃತದೇಹವು ಬಟ್ಟೆ ಇಲ್ಲದೆ ಬರಿ ಒಳ ಉಡುಪಿನಲ್ಲಿ ತೇಲುವ ಸ್ಥಿತಿಯಲ್ಲಿ ಗೋಚರಿಸಿದೆ. ಮೃತನ ಪತ್ನಿ ನಳಿನಾಕ್ಷಿ ತನ್ನ ಪತಿಯನ್ನು ಕೊಲೆಗೈದು ಹೊಳೆಯಲ್ಲಿ ಎಸೆಯಲಾಗಿದೆ ಎಂದು ದೂರು ನೀಡಿದ್ದಾರೆ. ಸ್ಥಳಕ್ಕೆ ಪ್ರೊಬೆಷನರಿ ಎಸ್ಪಿ ಯತೀಶ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಚೇತನ್ ಆಗಮಿಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.