ಸೋಮವಾರಪೇಟೆ,ಮಾ.27: ಸಮೀಪದ ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಕಾನ್ವೆಂಟ್‍ಬಾಣೆ ಗ್ರಾಮದ ಶ್ರೀಚೌಡೇಶ್ವರಿ, ಮುನೇಶ್ವರ ಹಾಗೂ ನಾಗದೇವರುಗಳ ವಾರ್ಷಿಕ ಮಹಾ ಪೂಜೋತ್ಸವಕ್ಕೆ ಅಳವಡಿಸಿದ್ದ ಬ್ಯಾನರ್‍ಗಳನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಏಕಾಏಕಿ ತೆರವುಗೊಳಿಸಿದ ಕ್ರಮಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ವಾಹನಕ್ಕೆ ತಡೆಯೊಡ್ಡಿದ ಘಟನೆ ಇಂದು ಸಂಜೆ ನಡೆಯಿತು.
ಕಳೆದೆರಡು ದಿನಗಳಿಂದ ಆಯೋಜನೆಗೊಂಡಿದ್ದ ಪೂಜೋತ್ಸವ ಕ್ಕೆ ಇಂದು ಸಂಜೆ ತೆರೆ ಬೀಳುವದಿತ್ತು. ಪೂಜೋತ್ಸವದ ಬ್ಯಾನರ್‍ಗಳನ್ನು ಗ್ರಾಮದ ನಾಲ್ಕೈದು ಕಡೆಗಳಲ್ಲಿ ಅಳವಡಿಸಲಾಗಿತ್ತು. ಇಂದು ಚುನಾ ವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಪಂಚಾಯಿತಿ ಸಿಬ್ಬಂದಿಗಳು ತ್ಯಾಜ್ಯ ವಿಲೇವಾರಿಯ ವಾಹನ ದೊಂದಿಗೆ ಆಗಮಿಸಿ, ಗ್ರಾಮಸ್ಥರಿಗೆ ಯಾವದೇ ಮಾಹಿತಿ ನೀಡದೇ ಏಕಾಏಕಿ ತೆರವುಗೊಳಿಸಿದರು.
ಸಿಬ್ಬಂದಿಗಳ ಈ ಕ್ರಮಕ್ಕೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ದರು. ‘ದೇವರ ಪೂಜೋತ್ಸವದ ಹಿನ್ನೆಲೆ ಅಳವಡಿಸಿದ್ದ ಬ್ಯಾನರ್‍ಗಳನ್ನು ನಮ್ಮ ಗಮನಕ್ಕೆ ತಾರದೇ ಏಕೆ ಬಿಚ್ಚಿದ್ದು? ಅದೂ ಅಲ್ಲದೇ ದೇವರ ಭಾವಚಿತ್ರವಿರುವ ಬ್ಯಾನರ್‍ಗಳನ್ನು ಕಸದ ತೊಟ್ಟಿಗೆ ಹಾಕಿದ್ದೀರಿ? ಇದರಲ್ಲಿ ಯಾವದೇ ರಾಜಕೀಯ ಮುಖಂಡರ ಭಾವಚಿತ್ರವಿಲ್ಲದಿದ್ದರೂ ತೆರವು ಗೊಳಿಸಿದ್ದು ಯಾಕೆ? ಹೇಳಿದ್ದರೆ ನಾವೇ ತೆರವುಗೊಳಿಸುತ್ತಿದ್ದೆವು’ ಎಂದು ಗ್ರಾ.ಪಂ. ಸಿಬ್ಬಂದಿಗಳಾದ ಜಯರಾಂ, ರಜಿ, ಭರತ್ ಅವರುಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಮಿಸ ಬೇಕೆಂದು ಪಟ್ಟು ಹಿಡಿದು ಪಂಚಾ ಯಿತಿಯ ವಾಹನಕ್ಕೆ ತಡೆಯೊಡ್ಡಿದರು. ಚುನಾವಣಾ ಕಾರ್ಯ ನಿಮಿತ್ತ ಮಡಿಕೇರಿಗೆ ತೆರಳಿದ್ದ ಪಿಡಿಓ ಸುಮೇಶ್ ಅವರು ಗ್ರಾಮಸ್ಥರೊಂದಿಗೆ ದೂರವಾಣಿ ಮೂಲಕ ಮಾತನಾಡಿ ‘ಪೂಜೋತ್ಸವ ಮುಗಿದಿದ್ದರಿಂದ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ಪಂಚಾಯಿತಿ ಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು’ ಎಂದರು.
ಇದಕ್ಕೆ ಒಪ್ಪದ ಗ್ರಾಮಸ್ಥರು ಪಂಚಾಯಿತಿ ಕ್ರಮದ ವಿರುದ್ಧ ಮತ್ತೆ ಆಕ್ರೋಶ ಮುಂದುವರೆಸಿ ಧಿಕ್ಕಾರ ಕೂಗಿದರು. ಸಂಜೆ 7 ಗಂಟೆ ಸುಮಾರಿಗೆ ಪೊಲೀಸ್ ಠಾಣಾಧಿಕಾರಿ ಮಂಚಯ್ಯ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದರು.
ದೇವಾಲಯ ಸಮಿತಿ ಅಧ್ಯಕ್ಷ ವಿಶ್ವನಾಥ್, ಗಣಪತಿ, ಲತೀಶ್, ಕೊರಗಪ್ಪ, ಬಸವರಾಜು, ಪಂಚಾಯಿತಿ ಅಧ್ಯಕ್ಷೆ ವನಜ, ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ಬನ್ನಳ್ಳಿ ಗೋಪಾಲ್, ಸುಭಾಶ್ ತಿಮ್ಮಯ್ಯ, ಭೋವಿ ಸಂಘದ ಅಧ್ಯಕ್ಷ ಸುಜಿತ್ ಸೇರಿದಂತೆ ಇತರರು ಸ್ಥಳಕ್ಕಾಗಮಿಸಿ ಪಂಚಾಯಿತಿ ಸಿಬ್ಬಂದಿಗಳ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ದರು. ಸಮಸ್ಯೆ ಬಗೆಹರಿಯದ ಹಿನ್ನೆಲೆ ವಾಹನ ತೆಗೆದುಕೊಂಡು ಪೊಲೀಸ್ ಠಾಣೆಗೆ ತೆರಳಿದರು. ಬಸ್ ನಿಲ್ದಾಣದ ಬಳಿ ವಾಹನ ನಿಲ್ಲಿಸಿ ಧಿಕ್ಕಾರ ಕೂಗಿದರು.
ಈ ಬಗ್ಗೆ ಮಾತನಾಡಿದ ಪಿಡಿಓ ಸುಮೇಶ್ ‘ಪೂಜೋತ್ಸವ ಮುಕ್ತಾಯವಾದ ಹಿನ್ನೆಲೆ, ಚುನಾವಣಾ ನೀತಿ ಸಂಹಿತೆ ಅನ್ವಯ ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದೆ. ಅದೂ ಅಲ್ಲದೇ ಬ್ಯಾನರ್ ಅಳವಡಿಕೆಗೆ ಪಂಚಾಯಿತಿಯಿಂದ ಅನುಮತಿ ಪಡೆದಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲಾಗುವದು’ ಎಂದರು.