ಶನಿವಾರಸಂತೆ, ಮಾ. 27: ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಇರುವ ಗುಂಡೂರಾವ್ ಬಡಾವಣೆ 2ನೇ ವಿಭಾಗದ ಅಂಗನವಾಡಿ ಕೇಂದ್ರದ ಹಳೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿದೆ ಎಂದು ಪೋಷಕರಾದ ಸಮೀನಾ, ಚಂದ್ರಾವತಿ, ರೇಖಾ, ಸುಮಾ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಅಂಗನವಾಡಿ ಕೇಂದ್ರದ ಕಟ್ಟಡದ ಮೇಲ್ಛಾವಣಿ ಗೆದ್ದಲು ಹಿಡಿದಿದೆ. ಗೋಡೆ ಬಿರುಕು ಬಿಟ್ಟಿದ್ದು, ಇಲಿ ಮಾತ್ರವಲ್ಲ, ಕೆಲವೊಮ್ಮೆ ಹಾವು ಬರುವದಿದೆ. ಮಳೆ ಬಂದಾಗ ಸೋರುವ ಮಾಳಿಗೆ, ಇಲ್ಲಿಗೆ ಪುಟ್ಟ ಮಕ್ಕಳನ್ನು ಅಂಗೈಯಲ್ಲಿ ಜೀವ ಹಿಡಿದು ಕಳುಹಿಸುವಂತಾಗಿದೆ ಎಂದು ಅವರು ಅಳಲು ತೋಡಿಕೊಂಡರು.

ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಈ ಅಂಗನವಾಡಿ ಕೇಂದ್ರದಲ್ಲಿ 12 ಮಕ್ಕಳು ಶಾಲಾ ಪೂರ್ವ ಶಿಕ್ಷಣಕ್ಕೆ ಹಾಜರಾಗು ತ್ತಿದ್ದಾರೆ. ಮುಗ್ಧ ಮಕ್ಕಳಿಗೆ ಅಪಾಯದ ಅರಿವಿಲ್ಲದೇ ಆಟವಾಡುತ್ತಾ, ಕಲಿಯುತ್ತಿವೆ. ಮಧ್ಯಾಹ್ನ ಊಟದ ಬಳಿಕ ವಿಶ್ರಾಂತಿಗಾಗಿ ಮಕ್ಕಳನ್ನು ಮಲಗಿಸಲು ಪೋಷಕರ ಭಯಪಡುವಂತಾಗಿದೆ.

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಕಲಿಕೆ, ಪೂರಕ ಆಹಾರದ ಬಗ್ಗೆ ಯಾವದೇ ದೂರುಗಳಿಲ್ಲ. ಗರ್ಭಿಣಿ ಸ್ತ್ರೀಯರ ಮಾತೃಪೂರ್ಣ ಯೋಜನೆ, ಕಿಶೋರಿಯರಿಗೆ ಸಲಹೆ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ಶಿಥಿಲಗೊಂಡು ಕುಸಿದು ಬೀಳುವ ಹಂತ ತಲಪಿರುವ ಕಟ್ಟಡವೇ ಪೋಷಕರು ಗಂಭೀರ ಸಮಸ್ಯೆಯಾಗಿದೆ. ಗ್ರಾಮ ಪಂಚಾಯಿತಿ ಸ್ಥಳಾವಕಾಶ ನೀಡಿದರೆ, ನೂತನ ಕಟ್ಟಡ ನಿರ್ಮಾಣಕ್ಕೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುದಾನ ದೊರೆಯುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.

- ನರೇಶ್ಚಂದ್ರ, ಶನಿವಾರಸಂತೆ