ಕೂಡಿಗೆ: ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ಕೊಡಗು ಜಿಲ್ಲೆ ದೇಶ ಕಾಯುವ ಯೋಧರನ್ನು ನೀಡಿದ ಪುಣ್ಯಭೂಮಿಯಾಗಿದ್ದು, ಇದರಲ್ಲಿ ತನ್ನದೇ ಆದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದ್ದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಇಂತಹ ಪುಣ್ಯಭೂಮಿಯ ಜಲ, ಕಾಡು, ಮಾತೃಭೂಮಿಯ ಉಳಿವಿಗೆ ತನ್ನದೇ ಆದ ತತ್ವ ಸಿದ್ಧಾಂತಗಳೊಂದಿಗೆ ಇಲ್ಲಿನ ಜನರು ಯೋಜನೆ ರೂಪಿಸಿಕೊಂಡಿದ್ದಾರೆ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಶ್ಲಾಘನೆ ವ್ಯಕ್ತಪಡಿಸಿದರು.
ಕೂಡಿಗೆಯ ಶ್ರೀ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಸಭಾಂಗಣದಲ್ಲಿ ತಾ. 27 ರಂದು ನಡೆದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆ ಪ್ರೇರಣೆಯ ಸ್ಥಳ. ಜಿಲ್ಲೆಯಲ್ಲಿ ಜಾತಿ ರಾಜಕೀಯ ಸಂದೇಶಕ್ಕೆ ಯಾವದೇ ಮನ್ನಣೆ ಇಲ್ಲ. ಕೊಡಗು ದೇಶ ಕಾಯುವ ಸೈನಿಕರನ್ನು ನೀಡಿರುವ ಬೀಡು. ಅಲ್ಲದೆ, ದೇಶಕ್ಕಾಗಿ ಅನ್ನ ನೀಡುವ ಜಿಲ್ಲೆ. ಇವುಗಳ ಜೊತೆಯಲ್ಲಿ ಅನ್ಯೋನತಾ ಭಾವನೆಯಲ್ಲಿ ಬದುಕುತ್ತಿರುವ ಜಿಲ್ಲೆ ಎಂದು ಬಣ್ಣಿಸಿದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ವಿವರಿಸಿದ ಅವರು, ಮೋದಿ ಅವರ ಸರ್ಕಾರದ ಆಡಳಿತದಲ್ಲಿ ಯಾವದೇ ಸಂಸದರು ಹಾಗೂ ಸಚಿವರಲ್ಲಿ ಸಣ್ಣ ಭ್ರಷ್ಟಚಾರದ ಕೊಳೆ ಅಂಟಿಕೊಂಡಿಲ್ಲ. ಪ್ರತಿಯೊಬ್ಬ ಸಾಮಾನ್ಯ ಮನುಷ್ಯನನ್ನು ಸ್ವಾಭಿಮಾನಿಯಾಗಿ ಮಾಡುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಹೆಚ್ಚು ಅನುದಾನವನ್ನು ನೀಡಿದೆ ಎಂದರು.
ಬಸವಪಟ್ಟಣದ ಶ್ರೀ ಬಸವಲಿಂಗಸ್ವಾಮೀಜಿ ಮಾತನಾಡುತ್ತಾ, ಧರ್ಮ ಮತ್ತು ರಾಜಕಾರಣ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ಶಾಸಕ ಎಂ.ಪಿ .ಅಪ್ಪಚ್ಚುರಂಜನ್ ಅವರು ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಬಿಜೆಪಿ ಕಾರ್ಯಕರ್ತರು ಮನೆ ಮನೆಗಳಿಗೆ ಭೇಟಿ ನೀಡಿ ಮೋದಿ ಅವರ ಸಾಧನೆಗಳ ಬಗ್ಗೆ ಅರಿವು ಮೂಡಿಸಿ, ಬಲಿಷ್ಠಗೊಳಿಸಬೇಕೆಂದರು. ದೇಶದಲ್ಲಿ 8 ಕೋಟಿ ಉಜ್ವಲ ಯೋಜನೆ ಜಾರಿ. 50 ಸಾವಿರ ಜನರ ಆರೋಗ್ಯ ಕಿಟ್ ಯೋಜನೆ ಹಾಗೂ 5 ಲಕ್ಷ ಪರಿಹಾರ ಯೋಜನೆ, ರೈತರಿಗೆ ಬಹುಮುಖ್ಯವಾಗಿ ಬೇಕಾದ ರಾಸಾಯನಿಕ ಯೂರಿಯ ಗೊಬ್ಬರದ ಸಬ್ಸಿಡಿಯ ಯೋಜನೆಯನ್ನು ಜಾರಿಗೊಳಿಸಿ ಜನರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಪರಿಹಾರ ಒದಗಿಸಿದೆ. ಜಿಲ್ಲೆಯಲ್ಲಿ ಕೇಂದ್ರ ಸಂಸದರು ಕೂಡಿಗೆಯನ್ನು ದತ್ತು ಗ್ರಾಮ ತೆಗೆದುಕೊಳ್ಳುವ ಮೂಲಕ ಪ್ರಧಾನ ಮಂತ್ರಿಯ ಕನಸಿನ ಯೋಜನೆ ಯನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಕುಮಾರಪ್ಪ ವಹಿಸಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ಜಿ.ಪಂ ಮಾಜಿ ಅಧ್ಯಕ್ಷ ವಿ.ಎಂ. ವಿಜಯ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್, ಸದಸ್ಯರಾದ ಮಂಜುಳಾ, ಲೀಲಾವತಿ, ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶಸ್ವಾಮೀಜಿ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಸದಸ್ಯರಾದ ಗಣೇಶ್, ಜಯಣ್ಣ, ಸಬಿತ ಚನ್ನಕೇಶವ, ತಂಗಮ್ಮ, ಪುಷ್ಪ, ತೊರೆನೂರು ಗ್ರಾ.ಪಂ. ಅಧ್ಯಕ್ಷ ದೇವರಾಜ್ ಸೇರಿದಂತೆ ಬಿಜೆಪಿಯ ಎಸ್.ಸಿ, ಎಸ್‍ಟಿ, ಮಹಿಳಾ ಘಟಕ, ಯುವ ಮೋರ್ಚ, ತಾಲೂಕು ಘಟಕ, ಶಕ್ತಿ ಕೇಂದ್ರದ ಹಾಗೂ ಬಿಜೆಪಿಯ ವಿವಿಧ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳು ಹಾಗೂ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಬೈಕ್‍ರ್ಯಾಲಿ: ಕೂಡಿಗೆಯಲ್ಲಿ ನಡೆದ ಕೂಡಿಗೆ ಮತ್ತು ಹೆಬ್ಬಾಲೆ ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶದ ಅಂಗವಾಗಿ ಕೊಡಗಿನ ಗಡಿಭಾಗ ಶಿರಂಗಾಲದಿಂದ ಕೂಡಿಗೆವರೆಗೆ ಸಾವಿರಾರು ಬೈಕ್ ರ್ಯಾಲಿ ನಡೆಯಿತು.
ಬೈಕ್ ರ್ಯಾಲಿಗೆ ಸಿರದನಹಳ್ಳಿ ಮಠದ ಸ್ವಾಮೀಜಿ ಹಾಗೂ ತೊರೆನೂರು ಮಠದ ಸ್ವಾಮೀಜಿ ಚಾಲನೆ ನೀಡಿದರು. ಬೈಕ್ ರ್ಯಾಲಿಯು ಶಿರಂಗಾಲದ ಪ್ರಮುಖ ಬೀದಿಗಳಲ್ಲಿ ಸಾಗಿ ಮಣಜೂರಿಗೆ ಆಗಮಿಸಿ, ಮಣಜೂರಿನ ಮೂಲಕ ಹೆಬ್ಬಾಲೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಭಾಂಗಣ ಸೇರಿತು.
ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸೇರಿದಂತೆ ಪಕ್ಷದ ಜಿಲ್ಲಾ ಮಟ್ಟದ ನಾಯಕರು ಬೈಕ್ ಚಾಲನೆ ಮಾಡುವದರ ಮೂಲಕ ಕಾರ್ಯಕರ್ತರೊಂದಿಗೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಬಿತ್ತಿ ಪತ್ರಗಳ ತೆರವು: ಚುನಾವಣೆ ದಿನಾಂಕ ಪ್ರಕಟಗೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯೆಷಾ ಆಗಮಿಸಿ ಚುನಾವಣ ನೀತಿ ಸಂಹಿತೆಯನ್ನು ಅನುಸರಿಸಿ ಪ್ರಮುಖ ಬೀದಿ ಗಳಲ್ಲಿ ಅಳವಡಿಸಿದ್ದ ಬಿತ್ತಿ ಪತ್ರಗಳನ್ನು ತೆರವುಗೊಳಿಸು ವಂತೆ ಸೂಚಿಸಿದರು. ಸ್ಥಳದಲ್ಲೇ ನಿಂತು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಚುನಾವಣೆಯ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಅಂತ್ಯಗೊಳಿಸುವಂತೆ ಶಾಸಕರಿಗೆ ಸೂಚನೆ ನೀಡಿದ ಪ್ರಸಂಗವೂ ನಡೆಯಿತು.