ಮಡಿಕೇರಿ, ಮಾ. 27 : ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ವರ್ಷಂಪ್ರತಿ ಅತ್ಯುನ್ನತ ವರದಿ, ಲೇಖನಗಳು, ಛಾಯಾಚಿತ್ರ, ವಿದ್ಯುನ್ಮಾನ ವರದಿಗಳಿಗೆ ಕೊಡಮಾಡುವ ವಾರ್ಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪತ್ರಕರ್ತರ ಸಂಘದಿಂದ ನೀಡಲಾಗುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ, ಪತ್ರಕರ್ತ ಕೋವರ್‍ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಕೋವರ್‍ಕೊಲ್ಲಿ ಚಂದ್ರಶೇಖರ್ ಸ್ಮರಣಾರ್ಥ ಸ್ಥಾಪಿಸಿರುವ ಮಾನವೀಯ ವರದಿಗೆ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ದಿ.ಕೆ.ಕೆ. ಶಶಿಧರ್ ಸ್ಮರಣಾರ್ಥ ಅತ್ಯುತ್ತಮ ಕ್ರೀಡಾ ವರದಿ, ಉಪಾಧ್ಯಕ್ಷರಾಗಿದ್ದ ಸಿ.ಎನ್. ಸುನಿಲ್‍ಕುಮಾರ್ ಜ್ಞಾಪಕಾರ್ಥ ಸ್ಥಾಪಿಸಲಾಗಿರುವ ಉತ್ತಮ ವೀಡಿಯೋಗ್ರಾಫಿ ಪ್ರಶಸ್ತಿ, ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಅವರು ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ಪ್ರಶಸ್ತಿ, ತಾಯಿ ಮಂಡಿಬೆಲೆ ದ್ಯಾನಮ್ಮ ಶಾಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ದೃಶ್ಯಮಾಧ್ಯಮ ವರದಿ, ಕೊಡಗು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ತಮ್ಮ ತಂದೆ, ತಾಯಿ ಅಜ್ಜಮಾಡ ಸುಬ್ಬಯ್ಯ ಹಾಗೂ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ವರದಿ, ಸ್ಪಸ್ಥ ಸಂಸ್ಥೆ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಶೈಕ್ಷಣಿಕ ವರದಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ತಮ್ಮ ತಾಯಿ ಬಲ್ಲಾರಂಡ ಮಾಚಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ರಾಜಕೀಯ ವರದಿ, ಆಪ್ತ ಸಮಾಲೋಚಕಿ ತೇಲಪಂಡ ಆರತಿಸೋಮಯ್ಯ ತಮ್ಮ ಮಾವ ಕೋಟೇರ ಮುತ್ತಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಆರೋಗ್ಯ ವರದಿ, ಕೈಬುಲಿರ ಪಾರ್ವತಿ ತಮ್ಮ ತಂದೆ, ತಾಯಿ ಉತ್ತಯ್ಯ ಸುಬ್ಬವ್ವ ಹೆಸರಿನಲ್ಲಿ ಸ್ಥಾಪಿಸಿರುವ ಪರಿಸರ ಮತ್ತು ನೈರ್ಮಲ್ಯ ವರದಿ, ಪತ್ರಕರ್ತರ ಸಂಘದ ರಾಜ್ಯಸಮಿತಿ ನಿರ್ದೇಶಕ ಎಸ್.ಎ. ಮುರಳೀಧರ್ ತಮ್ಮ ತಾಯಿ ಪಾರ್ವತಮ್ಮ ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಕೃಷಿ ವರದಿ, ಮರಗೋಡು ಹಾಲು ಉತ್ಪಾದಕರ ಸಂಘದ ಸ್ಥಾಪಕಾಧ್ಯಕ್ಷ ಮಂದ್ರಿರ ಮೋಹನ್‍ದಾಸ್ ಪ್ರಗತಿಪರ ಹಾಲು ಉತ್ಪಾದಕರಾಗಿದ್ದ ಉಳುವಾರನ ಶೇಷಗಿರಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಹೈನುಗಾರಿಕೆ ವರದಿ, ಶಕ್ತಿ ಸಂಪಾದಕರಾಗಿದ್ದ ಬಿ.ಜಿ. ಅನಂತಶಯನ ಅವರು ತಮ್ಮ ಹೊಂ ಸ್ಟೇ ಆಲ್ಪೆನ್ ಗ್ಲೊ ಹೆಸರಿನಲ್ಲಿ ಸ್ಥಾಪಿಸಿರುವ ಸುದ್ದಿಛಾಯಾಚಿತ್ರ ಪ್ರಶಸ್ತಿ, ಸಮಾಜಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಅವರು ತಮ್ಮ ತಂದೆ ಮೇರಿಯಂಡ ಪೂವಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಹುಲಿ ಸಂರಕ್ಷಣೆ ಕುರಿತಾದ ದೃಶ್ಯಮಾಧ್ಯಮ ವರದಿ ಪ್ರಶಸ್ತಿಗಳಿಗೆ ವರದಿ ಲೇಖನ, ಸಿ.ಡಿ.ಗಳನ್ನು ಆಹ್ವಾನಿಸಲಾಗಿದೆ.

ವರÀದಿ ಹಾಗೂ ಲೇಖನಗಳು 1.1.2017 ರಿಂದ 31.12.2017ರ ಒಳಗಡೆ ಪ್ರಕಟ, ಪ್ರಸಾರವಾಗಿರಬೇಕು. ವರದಿಗಾರರ, ಲೇಖಕರ ಹೆಸರುಗಳು ಇಲ್ಲದಿದ್ದಲ್ಲಿ ಆಯಾ ಪತ್ರಿಕೆ ಸಂಪಾದಕರು ಹಾಗೂ ಜಿಲ್ಲಾ ವರದಿಗಾರರಿಂದ ದೃಢೀಕರಣ ಪತ್ರ ಲಗತ್ತಿಸಬೇಕು. ಮೂಲ ಪ್ರತಿ ಹಾಗೂ ಎರಡು ಜೆರಾಕ್ಸ್ ಸೇರಿದಂತೆ ಮೂರು ಪ್ರತಿಗಳಲ್ಲಿ ಸಲ್ಲಿಸಬೇಕು, ದೃಶ್ಯಮಾಧ್ಯಮದವರು ಸಿ.ಡಿ.ಗಳ ಮೂಲಕ ಸಲ್ಲಿಸಬಹುದು.

ವರÀದಿ, ಲೇಖನಗಳನ್ನು ಏಪ್ರಿಲ್ 10ರೊಳಗಡೆ ಅಧ್ಯಕ್ಷರು, ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಪತ್ರಿಕಾಭವನ ಮಡಿಕೇರಿ ಇಲ್ಲಿಗೆ ಕಳುಹಿಸಿಕೊಡಬಹುದಾಗಿದೆ. ನಂತರ ಬಂದವುಗಳನ್ನು ಯಾವದೇ ಕಾರಣಕ್ಕೂ ಸ್ವೀಕರಿಸಲಾಗುವದಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.