ಶ್ರೀಮಂಗಲ: ವೀರಾಜಪೇಟೆ ತಾಲೂಕಿನಿಂದ ಕಳೆದ 6 ದಶಕಕ್ಕಿಂತ ಹೆಚ್ಚು ಕಾಲ ಬಿಜೆಪಿಯಿಂದ ಸ್ಥಳೀಯ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಶಾಸಕರಾಗಲು ಅವಕಾಶ ದೊರೆತಿಲ್ಲ. ಆದ್ದರಿಂದ ವೀರಾಜಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಮತದಾನದ ಹಕ್ಕು ಹೊಂದಿರುವ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಶಾಸಕ ಅಭ್ಯರ್ಥಿಯನ್ನಾಗಿ ಮಾಡಬೇಕೆನ್ನುವದು ಈ ಭಾಗದ ಪಕ್ಷದ ಕಾರ್ಯಕರ್ತರ ಹಕ್ಕೋತ್ತಾಯವಾಗಿದ್ದು ಈ ಬಗ್ಗೆ ಮಡಿಕೇರಿ ತಾಲೂಕಿನ ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಅವರು ಮೂಗು ತೂರಿಸುವ ಅವಶ್ಯಕತೆ ಇಲ್ಲ ಎಂದು ವೀರಾಜಪೇಟೆ ತಾಲೂಕಿನ ಬಿಜೆಪಿ ಪಕ್ಷದ ಪ್ರಮುಖರು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಲಿಖಿತ ಪತ್ರಿಕೆ ಹೇಳಿಕೆಯನ್ನು ಖುದ್ದಾಗಿ ನೀಡಿದ ಪ್ರಮುಖರು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ, ವೀರಾಜಪೇಟೆ ತಾಲೂಕಿಗೆ ಸೇರಿದ 38 ಪಂಚಾಯಿತಿ, 1 ಪಟ್ಟಣ ಪಂಚಾಯಿತಿ ಒಳಪಡುತ್ತದೆ. ಕ್ಷೇತ್ರದ ಶೇ. 80 ರಷ್ಟು ಮತದಾರರು ಈ ತಾಲೂಕು ವ್ಯಾಪ್ತಿಗೆ ಬರುತ್ತಾರೆ. ಈ ಕ್ಷೇತ್ರಕ್ಕೆ ಕಳೆದ 65 ವರ್ಷಗಳಿಂದ ಸ್ಥಳೀಯರಿಗೆ ಶಾಸಕರಾಗಲು ಅವಕಾಶ ವಂಚನೆಯಾಗಿದೆ ಎಂದಿದ್ದಾರೆ.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಮಾಜಿ ಪ್ರ.ಕಾರ್ಯದರ್ಶಿ ಮುಕ್ಕಾಟೀರ ಪ್ರವೀಣï ಭೀಮಯ್ಯ, ವೀರಾಜಪೇಟೆ ತಾಲೂಕು ಬಿಜೆಪಿ ಕಾರ್ಯದರ್ಶಿ ಚೊಟ್ಟೆಯಂಡಮಾಡ ಡಿ.ಮಾದಪ್ಪ, ತಾ.ಮಾಜಿ ಉಪಾಧ್ಯಕ್ಷ ಮಲ್ಲಮಾಡ ಪ್ರಭುಪೂಣಚ್ಚ ಅವರು ಲಿಖಿತ ಹೇಳಿಕೆಗೆ ಸಹಿ ಮಾಡಿದ್ದಾರೆ.