ಮಡಿಕೇರಿ, ಮಾ. 31: ರಾಜಧಾನಿ ಬೆಂಗಳೂರಿನ ಮಾರತಹಳ್ಳಿ ಐಸಿಐಸಿ ಬ್ಯಾಂಕ್ನ ಎರಡು ಎಟಿಎಂಗಳಿಗೆ ಸಂದಾಯ ಮಾಡಬೇಕಿದ್ದ ಹಣವನ್ನು ಲಪಟಾಯಿಸಿದ್ದ, ಕೊಡಗಿನ ಯುವಕನೊಬ್ಬನನ್ನು ಅಲ್ಲಿನ ಪೊಲೀಸರು ಬಂಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಸೋಮವಾರಪೇಟೆ ತಾಲೂಕು ಬೀಕಳ್ಳಿ ನಿವಾಸಿ, ಕೃಷ್ಣಪ್ಪ ಎಂಬವರ ಪುತ್ರ ಪರಮೇಶ್ ಬಂಧಿತ ಆರೋಪಿ ಯಾಗಿದ್ದು, ಈತ ಬೆಂಗಳೂರಿನ ಸಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಉದ್ಯೋಗ ಮಾಡುತ್ತಿದ್ದ. ತಾ. 9 ರಂದು ಮಾರತಹಳ್ಳಿಯಲ್ಲಿರುವ ಐಸಿಐಸಿ ಬ್ಯಾಂಕ್ ಶಾಖೆಯ ಎಟಿಎಂಗೆ ರೂ. 53 ಲಕ್ಷ ಹಣವನ್ನು ತುಂಬುವ ಹೊಣೆಗಾರಿಕೆಯನ್ನು ಆರೋಪಿಗೆ ನೀಡಲಾಗಿತ್ತು.
ಆದರೆ ಆರೋಪಿ ಪರಮೇಶ್ ತನ್ನ ಉಸ್ತುವಾರಿಯಲ್ಲಿ ವಾಹನ ದೊಂದಿಗೆ ನಗದು ಸಹಿತ ಬ್ಯಾಂಕಿಗೆ ತೆರಳಿದ್ದು, ಹಣದ ಮೊತ್ತವನ್ನು ಜಮೆಗೊಳಿಸದೆ, ಲಪಟಾಯಿಸುವದ ರೊಂದಿಗೆ, ನಕಲಿ ದಾಖಲೆ ಸೃಷ್ಟಿಸಿ ಹಣ ಹೂಡಿಕೆಯ ಲೆಕ್ಕ ತೋರಿಸಿ ಮೋಸಗೊಳಿಸಿದ್ದ ನೆಂದು ಗೊತ್ತಾಗಿದೆ.ಬಳಿಕ ತಾ. 17 ರಂದು ಪ್ರಕರಣ ಬೆಳಕಿಗೆ ಬಂದಿದ್ದು, ಸಂಬಂಧಿಸಿದ ಬ್ಯಾಂಕ್ ಮುಖ್ಯಸ್ಥರು ಸಿ.ಎಂ.ಎಸ್. ಏಜೆನ್ಸಿಯ ವ್ಯವಸ್ಥಾಪಕ ಲೋಕೇಶ್ ಎಂಬವರಿಗೆ ಈ ಬಗ್ಗೆ ಗಮನ ಸೆಳೆದಿದ್ದಾರೆ. ಆ ಮೇರೆಗೆ ಎಚ್ಚೆತ್ತು ಕೊಂಡ ಲೋಕೇಶ್ ಮಾರತಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಹಿನ್ನೆಲೆ ಸಂಗ್ರಹಿಸಿದ್ದಾರೆ.
ಈ ವೇಳೆ ಕೊಡಗಿನ ಸೋಮವಾರಪೇಟೆ ಬಳಿಯ ಬೀಕಳ್ಳಿ ನಿವಾಸಿಯೆಂದು ಖಾತರಿಯಾಗಿದ್ದು, ಮಾರತಹಳ್ಳಿ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ಕಾರ್ಯಾಚರಣೆ ಮೂಲಕ ಆರೋಪಿ ಪರಮೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ. ತಾ. 26 ರಂದು ಬೀಕಳ್ಳಿ ನಿವಾಸಕ್ಕೆ ಹಠಾತ್ ಧಾಳಿಯೊಂದಿಗೆ ಪರಮೇಶ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಗಡಿಗೆಯಲ್ಲಿ ಹೂತಿಟ್ಟಿದ್ದ : ಬೆಂಗಳೂರಿನಿಂದ ಎಟಿಎಂಗೆ ಪಾವತಿಸದೆ ರೂ. 53 ಲಕ್ಷವನ್ನು ಲಪಟಾಯಿಸಿದ್ದ ಆರೋಪಿಯು ರೂ. 2 ಸಾವಿರ ಮುಖಬೆಲೆಯ ನೋಟುಗಳಲ್ಲಿ ಅಂದಾಜು 50 ಸಾವಿರವನ್ನು ಖರ್ಚು ಮಾಡಿದ್ದರೆ, ಉಳಿದ ಮೊತ್ತವನ್ನು ಮಣ್ಣಿನ ಗಡಿಗೆ ಯೊಂದರಲ್ಲಿ ತುಂಬಿಸಿಟ್ಟಿದ್ದನೆಂದು ಗೊತ್ತಾಗಿದೆ. ಈ ಹಣವನ್ನು ಮನೆ ಬಳಿಯ ದನದ ಕೊಟ್ಟಿಗೆಯಲ್ಲಿ ಗುಂಡಿಯೊಳಗೆ ಗಡಿಗೆ ಸಹಿತ ಹೂತು ಹಾಕಿದ್ದು, ಬೆಳಕಿಗೆ ಬಂದಿದೆ.
ಆ ಮೇರೆಗೆ ಪೊಲೀಸರು ಗಡಿಗೆ ಹಣ ಹೂತಿಟ್ಟಿದ್ದನ್ನು ವಶಪಡಿಸಿ ಕೊಂಡು ಕಾನೂನು ಕ್ರಮ ಜರುಗಿಸಿ ದ್ದಾರೆ. ಆತನನ್ನು ಬೆಂಗಳೂರಿನ ಮೆಟ್ರೋಪಾಲ್ ಮೇಜಿಸ್ಟ್ರೇಟ್ 4ನೇ ವಿಭಾಗದ ಕೋರ್ಟ್ಗೆ ಹಾಜರು ಪಡಿಸಿದ ಮೇರೆಗೆ ಹೆಚ್ಚಿನ ವಿಚಾರಣೆಗಾಗಿ 3 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ವಿಚಾರಣೆ ಕೈಗೊಳ್ಳಲಾಗಿದೆ.
ಈ ಸಂಬಂಧ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಅವರೊಂದಿಗೆ, ಮಾರತಹಳ್ಳಿ ಸಬ್ಇನ್ಸ್ಪೆಕ್ಟರ್ ಸೋಮೇಶ್ ಗೆಜ್ಜೆ, ಠಾಣಾಧಿಕಾರಿ ನಾಗರಾಜ್, ರವಿಶಂಕರ್, ಯತೀಶ್, ವಿಠಲ ತಂಡ ಪಾಲ್ಗೊಂಡಿದ್ದಾಗಿ ಮಾಹಿತಿ ಲಭಿಸಿದೆ.