ಕೂಡಿಗೆ, ಮಾ. 31 : ಕಣಿವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಮುಖ್ಯೋಪಾಧ್ಯಾಯರ ಕೊಠಡಿ ಹಾಗೂ ಕಂಪ್ಯೂಟರ್ ಕೊಠಡಿಗೆ ನುಗ್ಗಲು ಯತ್ನಿಸಿರುವ ಕಳ್ಳರು ಕೊಠಡಿಯ ಕಿಟಕಿಯ ಕಬ್ಬಿಣದ ರಾಡನ್ನು ಮುರಿದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕಳ್ಳರು ಶಾಲೆಯ ಮುಂಭಾಗದ ಕಂಪ್ಯೂಟರ್ ಕೊಠಡಿಗೆ ನುಗ್ಗಲು ಪ್ರಯತ್ನಿಸಿ, ಕೊಠಡಿಯ ಬೀಗಗಳನ್ನು ಕಬ್ಬಿಣದ ಸಲಕರಣೆಯಿಂದ ಒಡೆದಿದ್ದು, ಬಾಗಿಲು ಲಾಕ್ ಆಗಿದ್ದರಿಂದ ಪ್ರಯತ್ನ ವಿಫಲವಾದಾಗ (ಮೊದಲ ಪುಟದಿಂದ) ಕಿಟಕಿಯ ರಾಡನ್ನು ಮುರಿದು ಒಳನುಗ್ಗಿ ಶಾಲೆಯ ಆರು ಕಪಾಟುಗಳನ್ನು (ಗಾಡ್ರಾಜ್ ಬೀರು) ಒಡೆದು ಶಾಲೆಯ ದಾಖಲೆಗಳನ್ನು ಚಲ್ಲಾಪಿಲ್ಲಿ ಮಾಡಿರುವದಲ್ಲದೆ, ಹಣಕ್ಕಾಗಿ ಗಾಡ್ರ್ರೆಜ್‍ನ ಸೇಫ್ಟಿ ಲಾಕರ್ ಒಡೆದಿದ್ದಾರೆ. ಆದರೆ, ಹಣವಿಲ್ಲದ್ದರಿಂದ ವಾಪಾಸ್ ಹೋಗಿದ್ದಾರೆ. ಎಂದಿನಂತೆ ಮುಖ್ಯೋಪಾಧ್ಯಾಯ ಗಣೇಶ್ ಶಾಲೆಗೆ ಬಂದಾಗ ಕೊಠಡಿಯ ಮುಂಭಾಗ ಬೀಗ ಬಿದ್ದಿದ್ದನ್ನು ಕಂಡು ಸ್ಥಳೀಯರಿಗೆ ವಿಷಯ ತಿಳಿಸಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರೊಂದಿಗೆ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.