ಮಡಿಕೇರಿ, ಮಾ. 31: ಭಾರತ ಸೇನೆಗೆ ಅಭೂತಪೂರ್ವ ಕೊಡುಗೆ ನೀಡಿರುವ ಕೊಡಗಿನ ನೆಲದ ವೀರ ಸೇನಾನಿಗಳ ಪರಂಪರೆಯನ್ನು ಮುಂದುವರೆಸುವ ಮೂಲಕ ಮಾತೃಭೂಮಿಯ ಸೇವೆಯಲ್ಲಿ ತೊಡಗಬೇಕೆಂದು ನೌಕಾದಳ ವೈಸ್ ಅಡ್ಮಿರಲ್ ಎ.ಆರ್. ಕರ್ವೆ ಯುವ ಜನಾಂಗಕ್ಕೆ ಕರೆ ನೀಡಿದರು. ನಗರದಲ್ಲಿ ಆಯೋಜಿಸಿದ್ದ ಜನರಲ್ ಕೆ.ಎಸ್. ತಿಮ್ಮಯ್ಯ ಜನ್ಮದಿನೋತ್ಸವದೊಂದಿಗೆ ಯುದ್ಧ ಸ್ಮಾರಕ ಲೋಕಾರ್ಪಣೆ ಸಮಾರಂಭ ದಲ್ಲಿ ಪಾಲ್ಗೊಂಡಿದ್ದ ಅವರು, ಮಾಧ್ಯಮದೊಂದಿಗೆ ಮಾತನಾಡುತ್ತಾ, ಮೇಲಿನಂತೆ ನುಡಿದರು.ದೇಶದ ರಕ್ಷಣೆಗೆ ತನ್ನದೇ ಕೊಡುಗೆ ನೀಡುವದರೊಂದಿಗೆ ವಿಶಿಷ್ಟ ಸಂಸ್ಕøತಿ ಹಾಗೂ ಸೌಂದರ್ಯಕ್ಕೆ ಹೆಸರಾಗಿರುವ ಕೊಡಗಿನ ನೆಲ ಹೆಮ್ಮೆಪಡುವಂತಹದ್ದು ಎಂದು ವ್ಯಾಖ್ಯಾನಿಸಿದ ಅವರು, ಹಿರಿಯರು ದೇಶ ಸೇವೆಗಾಗಿ ನಡೆಸಿದ ಸಮರ್ಪಿತ ಕೊಡುಗೆ ಅವಿಸ್ಮರಣೀಯ ವೆಂದು ಮಾರ್ನುಡಿದರು.

ಈ ನೆಲದ ಪ್ರಕೃತಿ, ಜನತೆಯ ಉಡುಗೆ-ತೊಡುಗೆಗಳೆಲ್ಲವೂ ವಿಶೇಷತೆಯೊಂದಿಗೆ ಸುಂದರ ಪರಂಪರೆಯದಾಗಿದ್ದು, ಇಲ್ಲಿನ ಜನತೆ ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ರಾಷ್ಟ್ರ ಸೇವೆಗಾಗಿ ತೊಡಗಿಸಿಕೊಂಡಿರುವ ಬಗ್ಗೆ ಗರ್ವಪಡಬೇಕೆಂದು ಅವರು ನೆನಪಿಸಿದರು.

ಇಂತಹ ಕೊಡಗಿನ ನೆಲದಲ್ಲಿ ಮಹಾನ್ ಸೇನಾನಿ ಜ. ಕೆ.ಎಸ್. ತಿಮ್ಮಯ್ಯ ಅವರ ಜನ್ಮದಿನಾಚರಣೆ ಹಾಗೂ ಯುದ್ಧ ಸ್ಮಾರಕ ಲೋಕಾ ರ್ಪಣೆಯಲ್ಲಿ ಪಾಲ್ಗೊಂಡಿದ್ದು, ತಮಗೆ ಅತೀವ ಸಂತಸ ತಂದಿದೆ ಎಂದು ನೌಕಾದಳ ಅಧಿಕಾರಿ ಕರ್ವೆ ಹೆಮ್ಮೆಯ ನುಡಿಯಾಡಿದರು.