ಸೋಮವಾರಪೇಟೆ,ಮಾ.31: ವಿಧಾನ ಸಭಾ ಚುನಾವಣಾ ನೀತಿಸಂಹಿತೆ ಹಿನ್ನೆಲೆ ಇಲ್ಲಿನ ಶಾಸಕರ ಕಚೇರಿಯನ್ನು ತೆರವುಗೊಳಿಸಿರುವ ಶಾಸಕ ಅಪ್ಪಚ್ಚು ರಂಜನ್ ಅವರು, ತಮ್ಮ ಪಕ್ಷದ ಪ್ರಮುಖರ ಜತೆಗೂಡಿ ತಾಲೂಕು ಬಿಜೆಪಿ ಕಚೇರಿಯಲ್ಲಿ ಗಣಪತಿ ಹೋಮ ನಡೆಸುವ ಮೂಲಕ ಚುನಾವಣಾ ರಾಜಕೀಯ ಅಖಾಡಕ್ಕಿಳಿದಿದ್ದಾರೆ.

ಅಪ್ಪಚ್ಚು ರಂಜನ್ ಅವರಿಗೆ ಈ ಬಾರಿ ಬಿಜೆಪಿ ಟಿಕೇಟ್ ಲಭಿಸುವದಿಲ್ಲ ಎಂದೇ ಕೆಲವರು ಹೇಳಿಕೊಂಡು ಬರುತ್ತಿದ್ದು, ರಾಜ್ಯಮಟ್ಟದ ಮಾಧ್ಯಮಗಳಲ್ಲಿ ಮಡಿಕೇರಿ ಕ್ಷೇತ್ರದ ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ರಂಜನ್ ಹೆಸರು ಬಂದಿರುವದು ಪಕ್ಷದ ಕಾರ್ಯ ಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ. ಅದೇ ಹುಮ್ಮಸ್ಸಿನಲ್ಲಿ ಚುನಾವಣಾ ಕಣಕ್ಕಿಳಿಯಲು (ಮೊದಲ ಪುಟದಿಂದ) ಅಪ್ಪಚ್ಚು ರಂಜನ್ ಮುಂದಾಗಿದ್ದಾರೆ.ಇಲ್ಲಿನ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಚಂದ್ರಶೇಖರ್ ಭಟ್ ಅವರ ನೇತೃತ್ವದಲ್ಲಿ ಹೋಮ ಕಾರ್ಯ ನಡೆಯಿತು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿ.ಪಂ. ಸದಸ್ಯೆ ಸರೋಜಮ್ಮ, ತಾ.ಪಂ. ಸದಸ್ಯೆ ತಂಗಮ್ಮ, ಬಲ್ಲಾರಂಡ ಮಣಿ ಉತ್ತಪ್ಪ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಪಕ್ಷದ ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ಯುವ ಮೋರ್ಚಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ನಗರಾಧ್ಯಕ್ಷ ಸೋಮೇಶ್, ಯುವ ಮೋರ್ಚಾದ ಶರತ್‍ಚಂದ್ರ, ಶಿಕ್ಷಕರ ಪ್ರಕೋಷ್ಠದ ಜೆ.ಸಿ. ಶೇಖರ್, ಜಿ.ಪಂ. ಮಾಜೀ ಅಧ್ಯಕ್ಷ ಶಿವಪ್ಪ ಸೇರಿದಂತೆ ಪಕ್ಷದ ಮುಖಂಡರು,ಕಾರ್ಯಕರ್ತರು ಪೂಜೆಯಲ್ಲಿ ಭಾಗವಹಿಸಿದ್ದರು. ಅಪ್ಪಚ್ಚು ರಂಜನ್ ಅವರಿಗೆ ಟಿಕೇಟ್ ನೀಡಬಾರದು ಎಂದು ಒತ್ತಾಯಿಸುತ್ತಲೇ ಬರುತ್ತಿರುವ ಕೆಲ ಪ್ರಮುಖರು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸದೇ ದೂರ ಉಳಿದಿದ್ದುದು ಗಮನಾರ್ಹವಾಗಿತ್ತು