ಆಲೂರುಸಿದ್ದಾಪುರ, ಏ. 1: ಬೆಸೂರು ಗ್ರಾಮ ಪಂಚಾಯಿತಿಯ ಸಮುದಾಯ ಭವನದಲ್ಲಿ ಎದುರು ಇಂದು ಮಾಜಿ ಸಚಿವ ಹಾಗೂ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ನೇತೃತ್ವದಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆ ಸುಮಾರು ಐದು ತಾಸುಗಳ ನಾಟಕೀಯ ಬೆಳವಣಿಗೆ ಬಳಿಕವೂ ಮೊಟಕುಗೊಳ್ಳುವಂತಾಯಿತು.
ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಮುದಾಯ ಭವನ ಎದುರು ಹಾಕಲಾಗಿದ್ದ ಶಾಮಿಯಾನದಲ್ಲಿ ಕಾರ್ಯಕರ್ತರು ನೆರೆದಿದ್ದರು. ಮಾಜಿ ಸಚಿವ ಬಿ.ಎ. ಜೀವಿಜಯ ಆಗಮನ ವೇಳೆ ಜೈಕಾರವೂ ಮೊಳಗಿತು. ಆದರೆ ಚುನಾವಣಾ ನೀತಿ ಸಂಹಿತೆಯಂತೆ ಈ ಕಾರ್ಯಕ್ರಮಕ್ಕೆ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಅಧಿಕಾರಿ ಸ್ವಾಮಿ ಹಾಗೂ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಜೆಡಿಎಸ್ ಬ್ಯಾನರ್, ಧ್ವಜ, ಧ್ವನಿವರ್ಧಕ ಇತ್ಯಾದಿ ಬಳಕೆಗೆ ಚುನಾವಣಾಧಿಕಾರಿಗಳ ಅನುಮತಿ ಪತ್ರ ಅಗತ್ಯವೆಂದು ನೆನಪಿಸಿದರು. ಕಾರ್ಯಕ್ರಮ ಸಂಘಟಕರು ಕೂಡ ಪತ್ರ ತರಲಾಗುತ್ತದೆ ಎಂದು ಸಬೂಬು ಹೇಳುತ್ತಲೇ ಕಳೆದರು.
ಅಪರಾಹ್ನ 3 ಗಂಟೆ ವೇಳೆಗೆ ಬಿ.ಎ. ಜೀವಿಜಯ ಭಾಷಣ ಕೂಡ ಮಾಡಿದರು. ಈ ಬಳಿಕ ಬಿಎಸ್ಪಿ ಪ್ರಮುಖ ಮೋಹನ್ಮೌರ್ಯ ಮಾತು ಆರಂಭಿಸುವ ವೇಳೆಗೆ ಅಧಿಕಾರಿಗಳು ಖಡಕ್ ಸೂಚನೆಯೊಂದಿಗೆ ಸಭೆಗೆ ತಡೆಯೊಡ್ಡಿದರು. ಜಿ.ಪಂ. ಮಾಜಿ ಅಧ್ಯಕ್ಷೆ ಹೆಚ್.ಬಿ. ಜಯಮ್ಮ, ಜಿ.ಪಂ. ಸದಸ್ಯ ಪುಟ್ಟರಾಜು, ಪ್ರಮುಖರಾದ ಚಂದ್ರಶೇಖರ್, ಸುರೇಶ್, ಪ್ರೇಂಕುಮಾರ್ ಮೊದಲಾದವರು ಹಾಜರಿದ್ದರು. ಒಟ್ಟಿನಲ್ಲಿ ಯಾವದೇ ಪೂರ್ವಾನುಮತಿಯಿಲ್ಲದೆ ಜೆಡಿಎಸ್ ಸಭೆ ಸುಮಾರು ಐದು ತಾಸುಗಳ ಬಳಿಕ ನಾಟಕೀಯವಾಗಿ ಕೊನೆಗೊಂಡಿತು. ಈ ಎಲ್ಲಾ ಬೆಳವಣಿಗೆ ಶನಿವಾರಸಂತೆ ಠಾಣಾಧಿಕಾರಿ ಆನಂದ್ ಹಾಗೂ ಸಿಬ್ಬಂದಿಯಿಂದ ಚಿತ್ರೀಕರಿಸಲ್ಪಟ್ಟಿದೆ. - ಕೆ.ಎನ್. ದಿನೇಶ್