ವೀರಾಜಪೇಟೆ, ಏ. 1: ದಂತ ವೈದ್ಯಕೀಯ ಇಂದಿನ ಸಮಾಜದಲ್ಲಿ ವಿಶಿಷ್ಟತೆಯನ್ನು ಪಡೆದಿದೆ. ದಂತ ವೈದ್ಯಕೀಯದ ಸಂಬಂಧದಲ್ಲಿ ಶಿಕ್ಷಣ ಪಡೆದರೆ ಸಾಲದು. ಆಗಿಂದಾಗಿನ ದಂತ ರೋಗ ಚಿಕಿತ್ಸೆಯ ಸಂಶೋಧನೆಯಿಂದ ಈ ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸಬಹುದು. ಈ ಕ್ಷೇತ್ರದಲ್ಲಿ ಸಂಶೋಧನೆ ಮಹತ್ವವನ್ನು ಪಡೆದಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ದಂತ ತಜ್ಞ ಪ್ರೊ. ಕೆ. ಮುನಿಯಪ್ಪ ಹೇಳಿದರು.

ವೀರಾಜಪೇಟೆ ಬಳಿಯ ಮಗ್ಗುಲದಲ್ಲಿರುವ ಕೊಡಗು ದಂತ ಮಹಾವಿದ್ಯಾಲಯದ 19ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿದ ಪ್ರೊ. ಮುನಿಯಪ್ಪ ಕೊಡಗಿನ ಪ್ರಕೃತಿ ಸೌಂದರ್ಯದ ಮಡಿಲಿನ ಸ್ವಚ್ಛ ಪರಿಸರ ತಾಣದಲ್ಲಿ ದಂತ ವೈದ್ಯಕೀಯ ಶಿಕ್ಷಣಕ್ಕಾಗಿ ಕೆಲವು ವರ್ಷಗಳ ಹಿಂದೆ ಆರಂಭಿಸಿರುವ ಕೊಡಗು ದಂತ ವೈದ್ಯಕೀಯ ವಿದ್ಯಾಲಯ ಅತ್ಯಲ್ಪ ಸಮಯದಲ್ಲಿಯೇ ತನ್ನ ಸಾಧನೆಯಿಂದ ಖ್ಯಾತಿಗಳಿಸಿದೆ. ವಿದ್ಯಾಲಯದ ಉತ್ತಮ ವಾತಾವರಣ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೇರೆಪಿಸಲಿದೆ ಎಂದರು.

ವಿದ್ಯಾಸಂಸ್ಥೆಯ ಡೀನ್ ಸುನೀಲ್ ಮುದ್ದಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿ ಶೃಂಗ ಅಮೃತೇಶ್ವರಿ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ಕೆ.ಸಿ. ಪೊನ್ನಪ್ಪ ವರದಿ ವಾಚಿಸಿದರು. ವಿ.ಟಿ. ಪ್ರಾರ್ಥನಾ ವಂದಿಸಿದರು.

ವಾರ್ಷಿಕೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.