ಶನಿವಾರಸಂತೆ, ಏ.1: ಏಳೆಂಟು ವಾರಗಳಿಂದ ಶನಿವಾರಸಂತೆಯ ಮಾರುಕಟ್ಟೆಯಲ್ಲಿ ಹಸಿ ಮೆಣಸಿನಕಾಯಿ ಸಂತೆ ನಡೆಯುತ್ತಿದ್ದು, ದರ ಕುಸಿತದಿಂದ ರೈತರ ಮೊಗ ಬಾಡಿದೆ. ಖಾರದ ಮೆಣಸಿನಕಾಯಿ ಬೆಳೆದ ಶನಿವಾರಸಂತೆ ಹೋಬಳಿಯ ರೈತರ ಬಾಳು ಈಗ ಕಹಿಯಾಗಿದೆ. ಈ ವರ್ಷ ಇಳುವರಿ ಚೆನ್ನಾಗಿದ್ದು, ರೈತರು ಉತ್ತಮ ದರದ ನಿರೀಕ್ಷೆಯಲ್ಲಿದ್ದರು. ಆದರೆ, ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕಡಿಮೆ ದರದಲ್ಲಿ ಖರೀದಿಸುತ್ತಿದ್ದು, ರೈತರು ನಿರಾಶರಾಗಿದ್ದಾರೆ.
ಈ ವಾರ ಸುತ್ತಮುತ್ತಲ ಗ್ರಾಮಗಳ ರೈತರು 5 ಲೋಡು ಮೆಣಸಿನಕಾಯಿಯನ್ನು ಮಾರುಕಟ್ಟೆಗೆ ತಂದಿದ್ದರು. ವ್ಯಾಪಾರಿಗಳು 1 ಕೆ.ಜಿ. ಮೆಣಸಿನಕಾಯಿಯನ್ನು ರೂ. 12-13ರ ದರದಲ್ಲಿ ಖರೀದಿಸಿದರು. 22 ಕೆ.ಜಿ. ಮೆಣಸಿನಕಾಯಿ ತುಂಬಿದ ಚೀಲಕ್ಕೆ ರೂ. 250-300ರ ದರ ದೊರೆಯಿತು. ‘ನಾವೇನು ಮಾಡುವಂತಿಲ್ಲ. ತಮಿಳುನಾಡಿನಲ್ಲಿ ಹೆಚ್ಚಾಗಿ ಬೆಳೆದಿದ್ದು, ದರ ಕಡಿಮೆಯಿದೆ. ಅಲ್ಲಿ ಬೆಳೆದ ಬುಲ್ಲೆಟ್ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚು. ಕರ್ನಾಟಕದ ಮೆಣಸಿನಕಾಯಿಗೆ ಬೇಡಿಕೆ ಇಲ್ಲವಾಗಿದೆ. ಕರ್ನಾಟಕದ ಮಾರುಕಟ್ಟೆಯಲ್ಲೂ ಮಾಲು ಜಾಸ್ತಿಯಾಗಿ ಬೇಡಿಕೆ ಕಡಿಮೆಯಾಗಿದೆ. ದರವೂ ಕುಸಿದಿದೆ’ ಎನ್ನುತ್ತಾರೆ ಯಸಳೂರಿನ ವ್ಯಾಪಾರಿ ಬಾಬು.
ಈ ವಿಭಾಗದ ಕೆಲ ಗ್ರಾಮಗಳಲ್ಲಿ ಮೆಣಸಿನಕಾಯಿ ಬೇಸಾಯ ತಡವಾಗಿ ಆರಂಭವಾಗಿದ್ದು, ಇನ್ನೆರಡು ವಾರದಲ್ಲಿ ಕೊಯ್ಲಿಗೆ ಬರಬಹುದು. ಉಲ್ಕಾ, ಇಂಡೊಪೈ, ಜಿ4 ಮೆಣಸಿನಕಾಯಿಗೆ ದರ ಜಾಸ್ತಿ ದೊರೆತರೂ ಪ್ರಿಯಾಂಕ, ಜ್ವಾಲಾ, ಅಲಂಕಾರ್, ಗುಂಟೂರು ಮೆಣಸಿನಕಾಯಿಗೆ ದರ ತೀರಾ ಕಡಿಮೆಯಾಗಿದೆ. ಇಲ್ಲಿನ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಖರೀದಿಸುವ ಮೆಣಸಿನಕಾಯಿಯನ್ನು ಮೈಸೂರು, ಮಂಗಳೂರು, ಶಿವಮೊಗ್ಗ, ಚಿತ್ರದುರ್ಗ, ಬಿಜಾಪುರ, ಹೊಸದುರ್ಗ ಮತ್ತಿತರ ಊರುಗಳಿಗೆ ರವಾನಿಸುತ್ತಾರೆ. ‘ಮೆಣಸಿನಕಾಯಿಗೆ 1 ಕೆ.ಜಿ.ಗೆ ರೂ. 15-20ರಂತೆ ದರ ದೊರೆತರೆ ರೈತ ಬದುಕಬಹುದು. ರೂ. 12 ದೊರೆತರೆ ಅಸಲಿಗೇ ಮೋಸವಾಗುತ್ತೆ. ಶ್ರಮಕ್ಕೆ ಬೆಲೆ ಇಲ್ಲ. ಗೊಬ್ಬರ ಬೆಲೆ ಜಾಸ್ತಿಯಾಗಿದ್ದು, ಕೂಲಿಯೂ ಹೆಚ್ಚಾಗಿದೆ. ಮಳೆ ಬಾರದ ಕಾರಣ ಗಿಡಗಳಿಗೆ ಮುಜುಗು ರೋಗ ತಗುಲಿದೆ. ಮಳೆ ಬಂದರೆ ರೋಗ ಹತೋಟಿಗೆ ಬಂದು ಇಳುವರಿ ಜಾಸ್ತಿಯಾಗುತ್ತೆ’ ಎನ್ನುತ್ತಾರೆ ಬಿಳಾಹ ಗ್ರಾಮದ ರೈತ ಬಿ.ಎಂ. ಪ್ರಕಾಶ್.
ಹಸಿರು ಮೆಣಸಿನಕಾಯಿ ಬೆಳೆ ರೈತರ ಮಳೆಗಾಲದ ಜೀವನಾಧಾರವಾಗಿದ್ದು, ಈ ವ್ಯವಸಾಯ ಮಳೆಯನ್ನೇ ಅವಲಂಬಿಸಿದೆ. ಮಳೆ ಕೈಕೊಟ್ಟ ಕಾರಣ ಕೊಳವೆ ಬಾವಿಯಲ್ಲೂ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ.