ಮಡಿಕೇರಿ, ಏ. 1: ನಿನ್ನೆ ನಗರದಲ್ಲಿ ಫೀ.ಮಾ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಫೋರಂ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಆಯೋಜಿಸಿದ್ದ ನೂತನ ಯುದ್ಧ ಸ್ಮಾರಕ ಉದ್ಘಾಟನೆ, ವೀರ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ 112 ಜಯಂತ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಭಾರತ್ ನೌಕಾದಳದ ವೈಸ್ ಅಡ್ಮಿರಲ್ ಎ.ಆರ್. ಕರ್ವೆ ತಮ್ಮ ಸರಳತೆ, ನಡೆ, ನುಡಿಗಳಿಂದ ಕೊಡಗಿನ ಸೇನಾ ಕುಟುಂಬಸ್ಥರ ಮನಗೆದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.
ತಮ್ಮ ಗಂಭೀರ ನಡೆಯೊಂದಿಗೆ ಹಸನ್ಮುಖರಾಗಿ ಕಾರ್ಯಕ್ರಮ ವೇದಿಕೆಗೆ ಆಗಮಿಸಿದ ಅವರು, ಸರಳ ಭಾವದಿಂದ ವೇದಿಕೆ ಮುಂಭಾಗ ಆಸೀನರಾಗಿದ್ದ ನಿವೃತ್ತ ಸೇನಾ ಮುಖ್ಯಸ್ಥರೆಲ್ಲರಿಗೆ ಹಸ್ತಲಾಘವ ದೊಂದಿಗೆ ಉಭಯ ಕುಶಲೋಪರಿ ವಿಚಾರಿಸಿದರು. ಹುತಾತ್ಮ ಯೋಧರಿಗೆ ನಮನ ಬಳಿಕ ಜನರಲ್ ತಿಮ್ಮಯ್ಯ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಭಾ ಕಾರ್ಯಕ್ರಮ ಬಳಿಕ ಜನತೆಯೊಂದಿಗೆ ಬೆರೆತರು.
ಎಲ್ಲರಿಗೂ ತೀರಾ ಪರಿಚಿತರಂತೆ ನಡೆದುಕೊಂಡು ಪ್ರತಿಯೊಬ್ಬರ ಅನಿಸಿಕೆಗಳನ್ನು ಮುಕ್ತಭಾವದಿಂದ ಆಲಿಸಿದರು. ಮುಂದುವರಿಗೆ ಕೊಡಗಿನ ವನಿತೆಯರ ಧಿರಿಸು ಕುರಿತು ಹರ್ಷ ಚಕಿತರಾಗಿ ಅನಿಸಿಕೆ ಹಂಚಿಕೊಂಡ ಕರ್ವೆ, ಸೈನಿಕ ಶಾಲಾ ಮಕ್ಕಳೆಡೆಗೆ ಧಾವಿಸಿ ಮಾತುಕತೆ ನಡೆಸಿದರು.
ಆ ನೀಳಕಾಯದ ಶುಭ್ರವಸ್ತ್ರಧಾರಿ ಸೇನಾಧಿಕಾರಿಯ ಕುಶಲೋಪರಿ ಪ್ರಶ್ನೆಗಳಿಗೆ ಲಗುಬುಗೆಯಿಂದಲೇ ಉತ್ತರಿಸಿದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಬಳಿಕ ದೇಶ ಸೇವೆಗಾಗಿ ಸೈನ್ಯಕ್ಕೆ ಸೇರುವಂತೆ ಹುರಿದುಂಬಿಸಿದ ಅಧಿಕಾರಿಯ ಮಾತಿಗೂ ತಲೆಯಾಡಿಸುತ್ತಾ ನಗು ಚೆಲ್ಲಿದರು. ಸಭಾ ಕಾರ್ಯಕ್ರಮದೊಂದಿಗೆ ಎಲ್ಲರೊಂದಿಗೆ ಬೆರೆತು ಸಜ್ಜನಿಕೆ ಮೆರೆದ ಅಧಿಕಾರಿ ಕರ್ವೆ ಅವರು, ಏರ್ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರೊಡಗೂಡಿ ವಾಹನ ವೇರುತ್ತಿದ್ದಂತೆ, ತೀರಾ ಆತ್ಮೀಯರೊಬ್ಬರನ್ನು ಬೀಳ್ಕೊಟ್ಟ ಸಂತೃಪ್ತಿಯಲ್ಲಿ ನೆರೆದಿದ್ದವರು ಒಂದೆಡೆಯಾದರೆ, ಅತ್ತ ಕೈ ಬೀಸುತ್ತಲೇ, ‘ಅಧಿಕಾರಿಗಳೆಂದರೆ ಹೀಗಿರಬೇಕು’ ಎಂದು ತೇಲಿಬಂದ ಮಹಿಳಾ ಸಮೂಹದ ಆ ಮಾತು ಎ.ಆರ್. ಕರ್ವೆ ನಡೆ-ನುಡಿಗೆ ಕನ್ನಡಿ ಹಿಡಿದಂತಿತ್ತು. -ಶ್ರೀಸುತ