ಸೋಮವಾರಪೇಟೆ, ಏ. 1: ಸಮೀಪದ ಹಳೆಮದಲಾಪುರ ಗ್ರಾಮದ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ನೀಡಿದ ದೂರಿನ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು ತಾ. 2 ರಂದು (ಇಂದು) ಜಂಟಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

ಹಳೆ ಮದಲಾಪುರ ಮತ್ತು ಯಲಕನೂರುಹೊಸಳ್ಳಿ ಗ್ರಾಮದ ಸುತ್ತಮುತ್ತ ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಅತಿಯಾಗಿ ರಾಸಾಯನಿಕ ಬಳಸಿ ಸಿಡಿಮದ್ದುಗಳನ್ನು ಬಳಸಿ ಸ್ಪೋಟಿಸಲಾಗುತ್ತಿದೆ ಎಂದು ಆರೋಪಿಸಿ, ಮುನೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ರಾಜಪ್ಪ ಮತ್ತು ಗ್ರಾಮಸ್ಥರು, ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಮುಖ್ಯ ಮಂತ್ರಿಗಳಿಗೆ ದೂರು ನೀಡಿದ್ದರು.

ಕಲ್ಲು ಗಣಿಗಾರಿಗೆ ನಡೆಯುತ್ತಿರುವ ಸ್ಥಳದಲ್ಲಿ ಪುರಾತನ ಗುಹೆ ಇರುವ ಮುನೇಶ್ವರ ದೇವಾಲಯ ಮತ್ತು ಬಸವೇಶ್ವರ ದೇವಾಲಯವಿದ್ದು, ಈ ಸ್ಥಳದಲ್ಲಿ ನದಿ, ಕೆರೆ, ಬುಡಕಟ್ಟು ಜನಾಂಗ ಹಾಗೂ ಜನವಸತಿ ಪ್ರದೇಶವಾಗಿದೆ. ಕಲ್ಲು ಸ್ಪೋಟದಿಂದ ಮನೆಗಳು ಬಿರುಕು ಬಿಡುವದರೊಂದಿಗೆ ಜಾನುವಾರುಗಳಿಗೆ ಹಾನಿಯಾಗುತ್ತಿದೆ. ಸುತ್ತಲೂ ಮೀಸಲು ಅರಣ್ಯವಿದ್ದು ತೇಗದ ಮರಗಳು ನಾಶವಾದ ನಿದರ್ಶನಗಳಿಗೆ. ಕಲ್ಲು ಮಿಶ್ರಿತ ಧೂಳಿನಿಂದ ಪರಿಸರಕ್ಕೂ ಹಾನಿಯಾಗುತ್ತಿದೆ. ಇಂತಹ ಅನೇಕ ಸಮಸ್ಯೆಗಳಿರುವದರಿಂದ ಕಲ್ಲು ಗಣಿಗಾರಿಕೆಯನ್ನು ತಡೆ ಹಿಡಿಯುವಂತೆ ಕೋರಿ ದೂರು ಸಲ್ಲಿಸಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ಅರಣ್ಯ, ಕಂದಾಯ ಇಲಾಖೆಯೊಂದಿಗೆ ಜಂಟಿ ಸ್ಥಳ ತನಿಖೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ಗಣಿಗಾರಿಕಾ ಸ್ಥಳದಲ್ಲಿ ಹಾಜರಿರುವಂತೆ ಕಲ್ಲು ಗಣಿ ಮಾಲೀಕರಾದ ಎಚ್.ಟಿ. ರವಿ, ಆಡಿನಾಡೂರು ಗ್ರಾಮದ ವಿ.ವಿ. ಶೈಲಾ ಮತ್ತು ದೂರುದಾರರಾದ ರಾಜಪ್ಪ ಮತ್ತು ಗ್ರಾಮಸ್ಥರಿಗೆ ತಿಳಿಸಿದ್ದಾರೆ.