ಸೋಮವಾರಪೇಟೆ, ಏ. 1: ಸೋಮವಾರಪೇಟೆ ಪಟ್ಟಣಕ್ಕೆ ಅನೇಕ ದಶಕಗಳ ಕಾಲ ಕುಡಿಯುವ ನೀರೊದಗಿಸಿ ಕಳೆದ ಕೆಲ ವರ್ಷಗಳಿಂದ ಬತ್ತಿಹೋಗಿದ್ದ ಆನೆಕೆರೆಯಲ್ಲಿ ಇದೀಗ ಜೀವಜಲ ಮೇಲೇಳುತ್ತಿದೆ. ಉದ್ಯಮಿ ಹಾಗೂ ದಾನಿಗಳೂ ಆಗಿರುವ ಹರಪಳ್ಳಿ ರವೀಂದ್ರ ಅವರು ತಮ್ಮ ಸ್ವಂತ ಹಣದಲ್ಲಿ ಹೂಳು ತೆಗೆಸಿದ ಪರಿಣಾಮ ಇದೀಗ ನೀರಿನ ಸೆಲೆ ಮೇಲೆದ್ದಿದ್ದು, ಆನೆಕೆರೆ ಜೀವಪಡೆದುಕೊಳ್ಳುತ್ತಿದೆ.

ಕಳೆದ 15 ದಿನಗಳ ಹಿಂದೆ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿ ಇದೀಗ ನೂರಾರು ಲೋಡ್ ಹೂಳು ತೆಗೆಯಲಾಗಿದ್ದು, ಕೆರೆಯ ತಳಭಾಗದಲ್ಲಿ ಜಲದ ಕಣ್ಣು ತೆರೆದುಕೊಂಡಿದೆ. ಬರಡಾಗಿದ್ದ ಕೆರೆಯ ಎರಡು ಕಡೆಗಳಲ್ಲಿ ಹೊಂಡ ನಿರ್ಮಿಸಲಾಗಿದ್ದು, ಈ ಹೊಂಡದಲ್ಲಿ ನೀರು ಬರಲಾರಂಭಿಸಿದ್ದರಿಂದ ಸಂತಸಗೊಂಡಿರುವ ರವೀಂದ್ರ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ತೆರಳಿ ಗಂಗೆ ಪೂಜೆ ನೆರವೇರಿಸಿದರು.

ಈಗಿರುವ ಕೆರೆಗಳ ಹೂಳು ತೆಗೆಸಿ ಅವುಗಳನ್ನು ಕಾಪಾಡಿಕೊಂಡರೆ ಕಾಲಕಾಲಕ್ಕೆ ಮಳೆಯಾಗುತ್ತದೆ. ಆ ಮೂಲಕ ರೈತರು, ಕೃಷಿಕರು ನೆಮ್ಮದಿಯ ಜೀವನ ಸಾಗಿಸಬಹುದು. ಮುಂದಿನ ದಿನಗಳಲ್ಲೂ ಇನ್ನೂ ಅನೇಕ ಕೆರೆಗಳನ್ನು ಪನರುಜ್ಜೀವನಗೊಳಿಸಲಾಗುವದು ಎಂದು ಹರಪಳ್ಳಿ ರವೀಂದ್ರ ಮನದಿಂಗಿತ ವ್ಯಕ್ತಪಡಿಸಿದರು.

ಇದರೊಂದಿಗೆ ಯಡೂರು ಕೆರೆಯಲ್ಲಿ ಹೂಳು ತೆಗೆದ ನಂತರ ನೀರು ಶೇಖರಣೆಗೊಳ್ಳುತ್ತಿದ್ದು, ಅಲ್ಲಿಯೂ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದರು. ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಯಡೂರು ಮತ್ತು ಆನೆಕೆರೆಯ ಹೂಳನ್ನು ತೆಗೆಯುವ ಮೂಲಕ ‘ಆಧುನಿಕ ಭಗೀರಥ’ರಾಗಿರುವ ಹರಪಳ್ಳಿ ರವೀಂದ್ರ ಅವರೊಂದಿಗೆ ಗ್ರಾಮಸ್ಥರು, ಸಂಘ ಸಂಸ್ಥೆಗಳು ಕೈಜೋಡಿಸಿದರೆ ಮತ್ತಷ್ಟು ಕೆರೆಗಳಿಗೆ ಜೀವ ತುಂಬಬಹುದು.

ಆನೆಕೆರೆ ಮತ್ತು ಯಡೂರು ಕೆರೆಯಲ್ಲಿ ರವೀಂದ್ರ ಅವರ ಪತ್ನಿ ನಯನ ರವೀಂದ್ರ, ಕುಟುಂಬಸ್ಥರಾದ ಬೀನಾ ಸುಧೀರ್, ತಾರಾ ವಸಂತ್, ಸುಷ್ಮಾ ಜಗದೀಶ್, ಪಾರ್ವತಿ ಈಶ್ವರ್, ಅಚಲ್ ರವೀಂದ್ರ, ಚಿರಾಗ್ ವೆಂಕಟೇಶ್, ಪ್ರಮುಖರಾದ ಹಾಲಪ್ಪ, ಬಸಪ್ಪ, ಬಾಲಕೃಷ್ಣ ಸೇರಿದಂತೆ ಇತರರು ಪೂಜೆ ಸಲ್ಲಿಸಿದರು. ಸೋಮವಾರಪೇಟೆಯ ಮೋಟಾರ್ ಯೂನಿಯನ್ ಹಾಗೂ ನಗರ ಗೌಡ ಒಕ್ಕೂಟದ ಸದಸ್ಯರುಗಳು ಹರಪಳ್ಳಿ ರವೀಂದ್ರ ಅವರೊಂದಿಗೆ ಕೈಜೋಡಿಸುವ ಮೂಲಕ ಒಂದಿಷ್ಟು ಬಲ ತುಂಬಿದ್ದಾರೆ.

-ವಿಜಯ್