ಮಡಿಕೇರಿ, ಏ. 1: ಬೆಂಗಳೂರು ಮಾರತಹಳ್ಳಿ ಐಸಿಐಸಿ ಬ್ಯಾಂಕ್ ಶಾಖೆಗೆ ಹಣ ಪಾವತಿಸದೆ ವಂಚಿಸಿರುವ ಪ್ರಕರಣದ ಆರೋಪಿ ಪರಮೇಶ್ ಎಂಬಾತನನ್ನು ಮೂರು ದಿನಗಳಿಂದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನ ಬೇರೆ ಬೇರೆ ಎಟಿಎಂ ಶಾಖೆಗಳಲ್ಲಿ ಈ ಹಿಂದೆ ಹಣ ವಂಚಿಸಿರುವ ಪ್ರಕರಣಗಳಿಗೂ, ಈಗಿನ ಕೃತ್ಯದ ಆರೋಪಿಗೂ ಯಾವದೇ ಸಂಬಂಧವಿಲ್ಲವೆಂದು ಮಾರತಹಳ್ಳಿ ಪೊಲೀಸರು ಖಚಿತಪಡಿಸಿದ್ದಾರೆ.
ಅಲ್ಲದೆ, ರೂ. 52 ಲಕ್ಷ ಮೊತ್ತವನ್ನು ಆರೋಪಿ ದೋಚಿದ್ದು, ಕಣ್ತಪ್ಪಿನಿಂದ ರೂ. 53 ಲಕ್ಷವೆಂದು ಉಲ್ಲೇಖಿಸಲ್ಪಟ್ಟಿದ್ದಾಗಿದೆ. ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಕಳ್ಳಿ ಗ್ರಾಮದ ಬಡ ರೈತ ಕೃಷ್ಣಪ್ಪ ಎಂಬವರ ಪುತ್ರ ಪರಮೇಶ್ ಈ ಕೃತ್ಯ ಎಸಗಿರುವದು ಗ್ರಾಮಸ್ಥರಲ್ಲಿ ಅಚ್ಚರಿಯೊಂದಿಗೆ ಆತಂಕ ಮೂಡಿಸಿದೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ಊರಿಗೆ ಬಂದಿದ್ದ ಆತ, ತನ್ನ ಪರಿಚಿತರೊಂದಿಗೆ ರಜೆಯಲ್ಲಿ ಬಂದಿರುವದಾಗಿ ಹೇಳಿಕೊಂಡಿದ್ದನಾದರೂ, ಮಾ. 26 ರಂದು ರಾತೋರಾತ್ರಿ ಮಾರತಹಳ್ಳಿ ಪೊಲೀಸರು ಆತನ ಮನೆಗೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಕೃಷ್ಣಪ್ಪ ಅವರ ಮನೆಯಿಂದ ಸ್ವಲ್ಪ ದೂರದಲ್ಲಿರುವ ದನದ ಕೊಟ್ಟಿಗೆಯಲ್ಲಿ ಮಗ ಹಣವನ್ನು ಗಡಿಗೆಯಲ್ಲಿ ಹೂತಿಟ್ಟಿದ್ದ ವಿಷಯ ಪೊಲೀಸರು ಧಾಳಿ ನಡೆಸುವ ತನಕ ಯಾರಿಗೂ ಗೊತ್ತಾಗಿರಲಿಲ್ಲವಂತೆ, ತಾ. 2 ರಂದು (ಇಂದು) ಆರೋಪಿಯನ್ನು ಪೊಲೀಸರು ತಮ್ಮ ವಶದಿಂದ ಬೆಂಗಳೂರು 4ನೇ ಮೆಟ್ರೋಪೋಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.