ಮಡಿಕೇರಿ, ಏ. 1: ಕಾರ್ಮಿಕರ ಕನಿಷ್ಟ ವೇತನಕ್ಕಿಂತಲೂ ಕಡಿಮೆ ಮೊತ್ತಕ್ಕೆ ತನ್ನ ಸಮ್ಮತಿಯನ್ನು ವ್ಯಕ್ತಪಡಿಸುವ ಮೂಲಕ ಎ.ಐ.ಟಿ.ಯು.ಸಿ. ಸಂಘಟನೆ ತೋಟ ಕಾರ್ಮಿಕರನ್ನು ವಂಚಿಸಿರುವದಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು)ನ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಡಾ. ಇ.ರ. ದುರ್ಗಾ ಪ್ರಸಾದ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಕನಿಷ್ಟ ವೇತನವನ್ನು ಸರ್ಕಾರ ರೂ. 385 ನಿಗದಿಪಡಿಸಿತ್ತು. ಇದನ್ನು ಮಾಲೀಕರ ಸಂಘÀಟನೆಯಾದ ಕೆ.ಪಿ.ಎ. ವಿರೋಧಿಸಿ ವೇತನವನ್ನು ರೂ. 305 ಕ್ಕೆ ತೀರ್ಮಾನಿಸಿತು. ಇದನ್ನು ಸಿ.ಐ.ಟಿ.ಯು. ಸಂಘಟನೆ ವಿರೋಧಿ ಸಿತ್ತಾದರೂ, ಎಐಟಿಯುಸಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಕೆಪಿಎ ತೀರ್ಮಾನವನ್ನು ಬೆಂಬಲಿಸುವ ಮೂಲಕ ಕಾರ್ಮಿಕರನ್ನು ವಂಚಿಸಿರುವದಾಗಿ ಆರೋಪಿಸಿದರು.

ಎಐಟಿಯುಸಿ ಸಂಘಟನೆ ಕಾರ್ಮಿಕರ ವೇತನದ ವಿಚಾರವಾಗಿ ತೆಗೆದುಕೊಂಡ ನಿಲುವಿನಿಂದಾಗಿ ರಾಜ್ಯದ ಸುಮಾರು 5 ಲಕ್ಷ ಕಾರ್ಮಿಕರಿಗೆ ದಿನ ಒಂದಕ್ಕೆ ರೂ. 80 ನಷ್ಟವಾಗುತ್ತಿದೆ ಎಂದು ಡಾ. ದುರ್ಗಾ ಪ್ರಸಾದ್ ಆರೋಪಿಸಿದರು. ಇಂತಹ ಕಾರ್ಮಿಕ ವಿರೋಧಿ ನಿಲುವಿನ ಪರವಾಗಿ ಸಿಐಟಿಯು ಸಂಘಟನೆ ನಿಲ್ಲಲಿಲ್ಲ ಎನ್ನುವ ಕಾರಣಕ್ಕಾಗಿ ನಮ್ಮ ಸಂಘಟನೆಯ ವಿರುದ್ಧ ವಿನಾಕಾರಣ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಐಟಿಯುಸಿ ಪ್ರಮುಖರಾದ ಗುಣಶೇಖರ್, ಸೋಮಪ್ಪ ಮತ್ತು ಮಣಿಯವರು ಇತ್ತೀಚೆಗೆ ಸಿಐಟಿಯುನ ಮಹದೇವ್ ಅವರ ಮೇಲೆ ಮಾಡಿರುವ ಆರೋಪಗಳು ಖಂಡನೀಯ. ಮಹದೇವ್ ಅವರು ಸಿಐಟಿಯು ಸಂಘಟನೆಯ ಉಪಾಧ್ಯಕ್ಷರಾಗಿ, ಕೊಡಗು ಜಿಲ್ಲಾ ಜನರಲ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ಲಾಂಟೇಶನ್ ವರ್ಕರ್ಸ್ ಫೆಡರೇಷನ್ ರಾಜ್ಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಮಿಕರಿಗೆ ಯಾವದೇ ವಂಚನೆಯನ್ನು ಮಾಡಿಲ್ಲವೆಂದು ದುರ್ಗಾ ಪ್ರಸಾದ್ ಸ್ಪಷ್ಟಪಡಿಸಿದರು. ಸಿಐಟಿಯು ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಎ. ಮಹದೇವ ಮಾತನಾಡಿ, ತಮ್ಮ ಸಂಘÀಟನೆ ಮೂಲಕ ಕಾರ್ಮಿಕರಿಂದ ಹಣ ವಸೂಲಿ ಮಾಡುತ್ತಿರುವ ಎಐಟಿಯುಸಿ ಆರೋಪ ಸತ್ಯಕ್ಕೆ ದೂರವಾಗಿದೆ. ವಾರ್ಷಿಕ ಆಡಿಟ್ ಮಾಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು. ಇತ್ತೀಚಿನ ದಿನಗಳಲ್ಲಿ ಎಐಟಿಯುಸಿ ಸಂಘÀಟನೆಯ ಪ್ರಮುಖರು ಕಾರ್ಮಿಕರ ನಡುವೆ ಜಾತಿ ಹೆಸರಿನಲ್ಲಿ ಒಡಕು ಮೂಡಿಸುವ ಯತ್ನ ಮಾಡಲಾಗುತ್ತಿದೆ ಎಂದು ಎ. ಮಹದೇವ್ ಗಂಭೀರ ಆರೋಪ ಮಾಡಿದರು. ಕಾರ್ಮಿಕರಿಗೆ ರೂ. 305 ವೇತನ ನಿಗದಿಯನ್ನು ಖಂಡಿಸಿ ಮುಂಬರುವ ದಿನಗಳಲ್ಲಿ ಚಿಕ್ಕಮಗಳೂರಿನ ಕೆಪಿಎ ಕಚೇರಿ ಎದುರು ಪ್ರತಿಭಟನೆ ನಡೆಸಲು ಉದ್ದೇಶಿಸಿರುವದಾಗಿ ತಿಳಿಸಿದರು.

ಸಿಐಟಿಯು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಮೇಶ್ ಮಾತನಾಡಿ, ಸರ್ಕಾರ ಕಾರ್ಮಿಕರಿಗೆ ನಿಗದಿಪಡಿಸಿರುವ ರೂ. 385 ವೇತನಕ್ಕೆ ಬದಲಾಗಿ ರೂ. 305 ವೇತನ ನಿಗದಿಪಡಿಸಿರುವ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗು ವದಾಗಿ ತಿಳಿಸಿದರು. ಎಐಟಿಯುಸಿ ಪ್ರಮುಖರಿಗೆ ಕಾರ್ಮಿಕರ ಪರವಾದ ನಿಲುವುಗಳಿದ್ದರೆ ನ್ಯಾಯಾಲಯಕ್ಕೆ ನಾವು ಸಲ್ಲಿಸುವ ವಕಾಲತ್ತಿಗೆ ಸಹಿ ಹಾಕಲಿ ಎಂದು ಸವಾಲೆಸೆದರು.

ರಾಜಕೀಯ ಪಕ್ಷಗಳ ಸುದ್ದಿ...

ಶಾಸಕರ ವೈಫಲ್ಯವೇ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆ

ಮಡಿಕೇರಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ದಶಕಗಳಿಂದ ನಿರಂತರವಾಗಿ ಆರಿಸಿಕೊಂಡು ಬಂದಿರುವ ಬಿಜೆಪಿ ಶಾಸಕರ ನಿಷ್ಕ್ರಿಯತೆ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರೀ ರಕ್ಷೆಯಾಗಲಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಉಸ್ತುವಾರಿ ಸಚಿವರುಗಳು, ವಿಧಾನ ಪರಿಷತ್ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಶ್ರಮದಿಂದ ಈ ಬಾರಿ ಕೊಡಗು ಜಿಲ್ಲೆಗೆ ಅತ್ಯಧಿಕ ಅನುದಾನ ಬಂದಿದ್ದು, ವಿಶೇಷ ಪ್ಯಾಕೇಜ್ ಸೇರಿದಂತೆ ಸುಮಾರು 2,450 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳು ಕಳೆದ ಐದು ವರ್ಷಗಳಲ್ಲಿ ನಡೆದಿದೆ. ಇದು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲು ಪೂರಕವಾಗಿದೆ. ಜಿಲ್ಲೆಯ ಜನತೆ ಕೂಡ ಇಬ್ಬರು ಶಾಸಕರನ್ನು ಬದಲಾಯಿಸುವ ಕಾತುರದಲ್ಲಿದ್ದಾರೆ ಎಂದು ತೆನ್ನಿರಮೈನಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜೆ.ಡಿ.ಎಸ್. ಇಲ್ಲಿಯವರೆಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಇತ್ತು. ಆದರೆ ಈಗ ಯಂ.ಸಿ. ನಾಣಯ್ಯ ಅವರು ನಿರ್ಗಮಿಸಿದ ನಂತರ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ ಎನ್ನುವಂತ್ತಾಗಿದ್ದು, ನಾಣಯ್ಯ ಅವರ ಸೇರ್ಪಡೆ ಕಾಂಗ್ರೆಸ್ ಪಕ್ಷದ ನೈತಿಕತೆಯನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಮಡಿಕೇರಿ: ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ವಿರುದ್ಧ ಕೆಲವು ವ್ಯಕ್ತಿಗಳು ಇತ್ತೀಚೆಗೆ ಪತ್ರಿಕಾ ಹೇಳಿಕೆ ನೀಡಿ ಅವರ ತೇಜೋವಧೆಗೆ ಪ್ರಯತ್ನಿಸಿರುವದನ್ನು ಖಂಡಿಸುವದಾಗಿ ತಿಳಿಸಿರುವ ಮಡಿಕೇರಿ ತಾಲೂಕು ಬಿಜೆಪಿ, ಈ ಸಂಬಂಧ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿರುವದಾಗಿ ತಿಳಿಸಿದೆ.

ಶಾಸಕರು ಹಾಗೂ ತಾಲೂಕು ಅಧ್ಯಕ್ಷರ ವಿರುದ್ಧ ಹೇಳಿಕೆ ನೀಡಿದವರು ಬಿಜೆಪಿಯವರೇ ಅಲ್ಲ. ಅದರಲ್ಲೂ ನಾಪೋಕ್ಲುವಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೋಜಿó ಚಿಣ್ಣಪ್ಪ ಅವರು ಕಳೆದ 10 ವರ್ಷಗಳಿಂದ ಪಕ್ಷದಲ್ಲಿ ಎಲ್ಲೂ ಗುರುತಿಸಿಕೊಂಡಿಲ್ಲ. ಮಾತ್ರವಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರ ಇಡೀ ಕುಟುಂಬ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚಿಸಿತ್ತು. ಮತ್ತೋರ್ವರಾದ ಬಾಬಿ ಚೀಯಣ್ಣ ಅವರು ಕಳೆದ 20 ವರ್ಷಗಳ ಹಿಂದೆಯೇ ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದು, ಗೋಷ್ಠಿಯಲ್ಲಿದ್ದ ಇತರ ವ್ಯಕ್ತಿಗಳು ಬಿಜೆಪಿಯ ಪ್ರಾಥಮಿಕ ಸದಸ್ಯರೇ ಅಲ್ಲ. ಹೀಗಿರುವಾಗ ಇವರಿಗೆ ಬಿಜೆಪಿಯನ್ನಾಗಲಿ, ಶಾಸಕ ಕೆ.ಜಿ.ಬೋಪಯ್ಯ ಅವರನ್ನಾಗಲಿ ಪ್ರಶ್ನೆ ಮಾಡುವ ನೈತಿಕ ಹಕ್ಕು ಇಲ್ಲ ಎಂದು ಕಾರ್ಯದರ್ಶಿ ಪ್ರಸನ್ನ ಗೋಷ್ಠಿಯಲ್ಲಿ ಹೇಳಿದ್ದಾರೆ.

ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ತಳೂರು ಕಿಶೋರ್ ಕುಮಾರ್ ಅವರು ಕಳೆದ ಎರಡು ಅವಧಿಯಿಂದ ಕೆಲಸ ಮಾಡುತ್ತಿದ್ದು, ಅವರು ಅಧ್ಯಕ್ಷರಾದ ಬಳಿಕ ತಾಲೂಕಿನ ಗ್ರಾಮ ಪಂಚಾಯಿತಿಗಳಿಂದ ಹಿಡಿದು ಎಲ್ಲಾ ರಂಗದಲ್ಲೂ ಬಿಜೆಪಿ ಗೆಲುವು ಸಾಧಿಸುತ್ತಾ ಬಂದಿದೆ. ಇದೇ ಕಾರಣದಿಂದ ಅವರು ಎರಡನೇ ಬಾರಿಗೆ ತಾಲೂಕು ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಇತ್ತೀಚೆಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಮಡಿಕೇರಿ ತಾಲೂಕಿನ 18 ಗ್ರಾಮ ಪಂಚಾಯಿತಿಗಳ ಸಮಿತಿ ಅಧ್ಯಕ್ಷರು, ಮಡಿಕೇರಿ ಕ್ಷೇತ್ರದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಬೆಟ್ಟಗೇರಿಯಲ್ಲಿ ಸಭೆ ನಡೆಸಿ ಶಾಸಕರ ಸಾಧನೆಗಳ ಬಗ್ಗೆ ಚರ್ಚಿಸಿದ್ದು, ಮುಂದಿನ ಬಾರಿಯೂ ಅವರಿಗೇ ಟಿಕೆಟ್ ನೀಡಬೇಕೆಂದು ಒತ್ತಾಯಿಸಲಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷದವರೇ ಅಲ್ಲದೆ ಕೆಲವರು ತಪ್ಪು ಹೇಳಿಕೆಗಳನ್ನು ನೀಡಿ ಶಾಸಕರ ಹಾಗೂ ತಾಲೂಕು ಅಧ್ಯಕ್ಷರ ತೇಜೋವಧೆಗೆ ಪ್ರಯತ್ನಿಸಿರುವದು ಖಂಡನೀಯ ಎಂದು ಹೇಳಿದರು.

ಮಡಿಕೇರಿಯಲ್ಲಿದ್ದ ಆರ್‍ಟಿಒ ಕಚೇರಿಯನ್ನು ಬೋಪಯ್ಯ ಅವರು ತಮ್ಮ ಸ್ವಾರ್ಥಕ್ಕಾಗಿ ಕೆ.ನಿಡುಗಣೆಗೆ ಸ್ಥಳಾಂತರಿಸಿದ್ದಾರೆ ಎಂದು ಕೆಲವರು ಆರೋಪಿಸಿದ್ದು, ಇದರಲ್ಲಿ ಯಾವದೇ ಸತ್ಯಾಂಶವಿಲ್ಲ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಹಾಗೂ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರುಗಳು ಜನರಲ್ ತಿಮ್ಮಯ್ಯ ಅವರು ಜನ್ಮ ಶತಮಾನೋತ್ಸವಕ್ಕೆ ಮಡಿಕೇರಿಗೆ ಆಗಮಿಸಿದ್ದರು. ಈ ಸಂದರ್ಭ ತಿಮ್ಮಯ್ಯ ಅವರು ಜನಿಸಿದ ಮನೆಯನ್ನು ಸ್ಮಾರಕವನ್ನಾಗಿ ನಿರ್ಮಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧೀನದಲ್ಲಿದ್ದ ಮನೆಯನ್ನು ಸರಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಹಸ್ತಾಂತರಿಸುವದರೊಂದಿಗೆ, ಆರ್‍ಟಿಒ ಕಚೇರಿಗೆ ಅಗತ್ಯವಿರುವ ಸುಮಾರು 2 ಎಕರೆ ಜಾಗ ಮಡಿಕೇರಿ ನಗರದೊಳಗೆ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ನಗರದ ಬಳಿ ಇರುವ ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಎರಡು ಎಕರೆ ಜಾಗವನ್ನು ಇಲಾಖೆಗೆ ನೀಡಿತ್ತು. ಹಲವಾರು ವರ್ಷಗಳ ಹಿಂದೆಯೇ ಆ ಜಾಗದಲ್ಲಿ ಆರ್‍ಟಿಒ ಕಚೇರಿ ಕಾರ್ಯಾರಂಭ ಮಾಡಿದ್ದರೂ, ತಮ್ಮ ಸ್ವಾರ್ಥಕ್ಕಾಗಿ ಶಾಸಕರು ಕಚೇರಿಯನ್ನು ವರ್ಗಾಯಿಸಿದ್ದಾರೆ ಎಂದು ಆರೋಪಿಸಿರುವದು ಹಾಸ್ಯಾಸ್ಪದವೆಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ನೆಲ್ಲಚಂಡ ಕಿರಣ್ ಕಾರ್ಯಪ್ಪ, ಮಡಿಕೇರಿ ತಾ.ಪಂ. ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ನಾಪೋಕ್ಲು ಗ್ರಾಮ ಸಮಿತಿಯ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಹಾಗೂ ಬಲ್ಲಮಾವಟಿ ಗ್ರಾಮ ಸಮಿತಿಯ ಪ್ರ.ಕಾರ್ಯದರ್ಶಿ ಚಂಗೇಟಿರ ಕುಮಾರ್ ಉಪಸ್ಥಿತರಿದ್ದರು.