ಕುಶಾಲನಗರ, ಏ. 1: ವಿಶ್ವ ಜಲ ದಿನದ ಅಂಗವಾಗಿ ಸ್ಥಳೀಯ ಸರಕಾರಿ ಪ್ರೌಢಶಾಲೆಯ ಸ್ಟೂಡೆಂಟ್ ಪೊಲೀಸ್ ಕೆಡೆಟ್‍ಗಳು ಮನೆಮನೆಗೆ ತೆರಳಿ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು.

ಕುಶಾಲನಗರ ಪಟ್ಟಣ ಪಂಚಾಯ್ತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಇಕೋ ಕ್ಲಬ್, ಸರಕಾರಿ ಪ್ರೌಢಶಾಲೆಯ ಸ್ಟೂಡೆಂಟ್ ಪೊಲೀಸ್ ಕೆಡೆಟ್ ತಂಡದವರು ಜಾಥಾ ನಡೆಸಿ ಪಟ್ಟಣದ ಮನೆಮನೆಗಳಿಗೆ ತೆರಳಿ ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದರು.

ನೀರು ಅಮೂಲ್ಯವಾದ ವಸ್ತು, ನೀರನ್ನು ಸಂರಕ್ಷಿಸೋಣ ಎಂಬ ಶೀರ್ಷಿಕೆಯ ನೀರಿನ ಸಂರಕ್ಷಣೆ ಮಾಹಿತಿಯುಳ್ಳ ಕರಪತ್ರಗಳನ್ನು ವಿದ್ಯಾರ್ಥಿಗಳು ವಿತರಿಸಿದರು. ಕರಾವಿಪ ಜಿಲ್ಲಾ ಸಂಯೋಜಕ, ಶಿಕ್ಷಕ ಟಿ.ಜಿ. ಪ್ರೇಮ್‍ಕುಮಾರ್ ಮಾತನಾಡಿದರು.

ಸರಕಾರಿ ಪ್ರೌಢಶಾಲೆಯ ಎಸ್ಪಿಸಿ ತಂಡದ ಕಮ್ಯುನಿಟಿ ಪೊಲೀಸ್ ಅಧಿಕಾರಿ ಡಾ.ಸದಾಶಿವಯ್ಯ ಎಸ್. ಪಲ್ಲೇದ್, ಸಹಾಯಕ ಅಧಿಕಾರಿ ತುಳಸಿ, ಪಟ್ಟಣ ಪಂಚಾಯ್ತಿ ಅಧಿಕಾರಿ ಸತೀಶ್, ಕರಾವಿಪ ಸದಸ್ಯರಾದ ಜಿ. ಶ್ರೀಹರ್ಷ, ಎನ್.ಎ. ಅಶ್ವಥ್, ಟಿ.ಬಿ. ಮಂಜುನಾಥ್, ಸಿಆರ್‍ಪಿ ಶಿವಲಿಂಗ, ಪಪಂ ದಫೇದಾರ್ ಕುಮಾರ್ ಮತ್ತಿತರರು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ವಿವಿಧ ಘೋಷಣೆಗಳ ಫಲಕಗಳನ್ನು ಹಿಡಿದು ಪಟ್ಟಣದ ವಿವಿಧ ಬಡಾವಣೆಗಳಿಗೆ ತೆರಳಿ ವಿದ್ಯಾರ್ಥಿಗಳು ಜಲ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.