ಸೋಮವಾರಪೇಟೆ: ಸಮೀಪದ ಐಗೂರಿನ ಶ್ರೀ ಮುತ್ತಪ್ಪಸ್ವಾಮಿ ದೇವಾಲಯದ ಜೀರ್ಣೋದ್ಧಾರ ಅಂಗವಾಗಿ ಅರ್ಚಕರ ನೇತೃತ್ವದಲ್ಲಿ ಜೀರ್ಣೋದ್ಧಾರ ಪ್ರತಿಬಂಧಕ ದೋಷ ಪರಿಹಾರ ಪೂಜೆಗಳನ್ನು ನೆರವೇರಿಸಲಾಯಿತು. ಮುತ್ತಪ್ಪಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಮುನ್ನಾ ಕೆಲವು ಪೂಜೆಗಳನ್ನು ಮಾಡಿಸಬೇಕೆಂಬ ವಿಚಾರಗಳು ಪ್ರಶ್ನೆಯಲ್ಲಿ ಬಂದ ಕಾರಣ ಅರ್ಚಕರಾದ ಜಗದೀಶ್ ಉಡುಪ ಅವರ ನೇತೃತ್ವದಲ್ಲಿ ಮಂಗಳೂರಿನ ಕದ್ರಿಯ ಶ್ರೀರಂಗ ಐತಾಳ್ ಅವರ ಸಹಕಾರದೊಂದಿಗೆ ಗಣಪತಿ ಹೋಮ, ಪಂಚಗವ್ಯ ಶುದ್ಧಿ ನಂತರ ಸಂಜೆ ಅಘೋರಾಸ್ತ್ರ ಹೋಮ ನಡೆಯಿತು.

ಪೂಜಾ ಕಾರ್ಯದಲ್ಲಿ ಸೋಮವಾರಪೇಟೆ ಅಯ್ಯಪ್ಪಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ, ವಾದಿರಾಜ್ ಭಟ್, ವೇದವ್ಯಾಸ ಭಟ್ ಸಹಕರಿಸಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಸಿ.ಎಸ್.ಮಹೇಶ್ ಮಾತನಾಡಿ, ಏಪ್ರಿಲ್‍ನಲ್ಲಿ ಮುತ್ತಪ್ಪಸ್ವಾಮಿ ದೇವರ ಉತ್ಸವ ಮುಗಿದ ನಂತರ ದೇವಾಲಯದ ಜೀರ್ಣೋದ್ಧಾರ ಕಾರ್ಯ ಆರಂಭವಾಗಲಿದೆ ಎಂದರು. ಈ ಸಂದರ್ಭ ಕಾರ್ಯದರ್ಶಿ ಟಿ.ಆರ್. ವಿಜಯ್‍ಕುಮಾರ್, ಜೀರ್ಣೋದ್ಧಾರ ಸಮಿತಿಯ ಎಂ.ಎನ್. ಬೆಳ್ಳಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.