ಗೋಣಿಕೊಪ್ಪಲು,ಏ.1: ಬಾಳೆಲೆ-ನಿಟ್ಟೂರು-ಕಾನೂರು, ಬಾಳೆಲೆ-ಮೂರ್ಕಲ್ಲು-ನಾಗರಹೊಳೆ ಸಂಪರ್ಕ ಸೇತುವೆ ಸುಮಾರು ರೂ.5.60 ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾರ್ಯ ಮುಗಿಯಬೇಕಿದ್ದು, ಕಳೆದ ಹಲವು ತಿಂಗಳುಗಳಿಂದ ಕಾಮಗಾರಿ ಸ್ಥಗಿತಗೊಂಡಿರುವದಾಗಿ ನಿಟ್ಟೂರು, ಬಾಳೆಲೆ ಗ್ರಾಮಸ್ಥರು ಆರೋಪಿಸಿದ್ದಾರೆ.
ನಿಟ್ಟೂರುವಿನ ಲಕ್ಷ್ಮಣ ತೀರ್ಥ ನದಿಗೆ ಅಡ್ಡಲಾಗಿ ನಿರ್ಮಾಣ ಗೊಂಡಿರುವ ಈ ಹಿಂದಿನ ಸೇತುವೆ ಮಳೆಗಾಲ ಸಂದರ್ಭ ಸುಮಾರು 3 ತಿಂಗಳ ಕಾಲ ಮುಳುಗಡೆಯಾಗುತ್ತಿದ್ದು ನಿರಂತರ ಬಾಳೆಲೆ ಸಂಪರ್ಕ ಕಡಿತಗೊಳ್ಳುತ್ತಿತ್ತು. ಈ ಬಗ್ಗೆ ಅಲ್ಲಿನ ಸಾರ್ವಜನಿಕರ ಹಲವು ವರ್ಷದ ಹೋರಾಟ ಹಾಗೂ ಮಾಜಿ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಜನಸ್ಪಂದನ ಸಭೆಯಲ್ಲಿ ಹೋರಾಟಗಾರರಾದ ಅರಮಣಮಾಡ ಸತೀಶ್ ದೇವಯ್ಯ ಅವರ ಮನವಿ ಮತ್ತು ಬಾಳೆಲೆ ಆದೇಂಗಡ ವಿನು ಉತ್ತಪ್ಪ ಅವರ ಪ್ರಯತ್ನದ ಫಲವಾಗಿ ಕಳೆದ ಮೂರು ವರ್ಷಗಳ ಹಿಂದೆ ಉದ್ಧೇಶಿತ ಸೇತುವೆಗೆ ಬದಲಿಯಾಗಿ ಪ್ರವಾಹಕ್ಕೆ ಸಿಲುಕದಿರಲು ಎತ್ತರದ ಸೇತುವೆ ನಿರ್ಮಾಣ ಹಾಗೂ ತಗ್ಗು ಪ್ರದೇಶವನ್ನು ಎತ್ತರಿಸುವ ಮೂಲಕ, ಪ್ರವಾಹದ ನೀರು ಕಲ್ವರ್ಟ್ ಗಳ ಮೂಲಕ ಹೊರಹೋಗಲು ಸುಮಾರು ರೂ.5.60 ಲಕ್ಷದ ಯೋಜನೆ ಸಿದ್ಧವಾಯಿತು. ಗುತ್ತಿಗೆಯನ್ನು ಮೈಸೂರಿನ ಭಾಸ್ಕರ್ರೆಡ್ಡಿ ಎಂಬವರಿಗೆ ನೀಡಲಾಯಿತು.
ಮೊದ ಮೊದಲು ಕಾಮಗಾರಿ ವೇಗ ಪಡೆದುಕೊಂಡಿದ್ದರೂ ಇದೀಗ ಕಳೆದ ಹಲವು ತಿಂಗಳಿನಿಂದ ಕೆಲಸ ಸ್ಥಗಿತಗೊಂಡಿದೆ. ಸೇತುವೆ ಸಮೀಪ ಭೂ ಮಾಲೀಕರೊಬ್ಬರು ರಸ್ತೆ ಅಗಲೀಕರಣಕ್ಕೆ ಸ್ಥಳ ಬಿಡದಿರುವ ನೆಪವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈವರೆಗೆ ಹೇಳಿಕೊಂಡು, ದೂರಿಕೊಂಡು ಬಂದಿದ್ದರು. ಆದರೆ, ಇದೀಗ ಭೂಮಾಲೀಕರು ತಮ್ಮ ಜಾಗವನ್ನು ರಸ್ತೆ ಅಗಲೀಕರಣಕ್ಕೆ ಬಿಟ್ಟುಕೊಟ್ಟಿದ್ದಾರೆ. ಇದೇ ವರ್ಷ ಫೆ.14 ರಂದು ಭೂ ಮಾಲೀಕರಿಗೆ ಪರಿಹಾರವಾಗಿ ರೂ.1,43,248 ಚೆಕ್ ನೀಡಲಾಗಿದೆ. ಸಮಸ್ಯೆ ಬಗೆಹರಿದು ಎರಡು ತಿಂಗಳಾಗುತ್ತಾ ಬಂದರೂ ಕಾಮಗಾರಿ ಆರಂಭಗೊಳ್ಳುವ ಸೂಚನೆ ಕಾಣುತ್ತಿಲ್ಲ.
ಜಿಲ್ಲಾ ಕಾರ್ಯಪಾಲಕ ಅಭಿಯಂತರರ ವಿರುದ್ಧ ಟೀಕೆ
ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ದೇವಯ್ಯ ಅವರು ಕಾಮಗಾರಿ ವಿಳಂಬಕ್ಕೆ ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಭು ಅವರೇ ಹೊಣೆ ಹೊರಬೇಕು ಎಂದು ದೂರಿದ್ದಾರೆ. ಗುತ್ತಿಗೆದಾರರಿಗೆ ‘ಬಿಲ್’ ಪಾವತಿಯಲ್ಲಿ ವಿಳಂಬಗತಿ, ಅನುದಾನ ಬಿಡುಗಡೆಗೆ ಸೂಕ್ತ ಸ್ಪಂದನೆ ನೀಡದಿರುವದು ಹಾಗೂ ಸಾರ್ವಜನಿಕರ ದೂರವಾಣಿ ಕರೆಯನ್ನೂ ಸ್ವೀಕರಿಸದೆ ನಿರ್ಲಕ್ಷ್ಯವಹಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಲ್ಲಿಯೂ ದೂರಿತ್ತಿರುವದಾಗಿ ತಿಳಿಸಿದ್ದಾರೆ.
ಗುತ್ತಿಗೆದಾರ ಭಾಸ್ಕರ್ ರೆಡ್ಡಿ ಅವರು ಅನುದಾನ ಬಿಡುಗಡೆಯಾದಲ್ಲಿ ಶೀಘ್ರ ಕಾಮಗಾರಿ ಮುಗಿಸುವದಾಗಿ ಹೇಳುತ್ತಿದ್ದರೂ, ಇದೀಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ರುವದರಿಂದ ಮೇ. 15 ರವರೆಗೂ ಮತ್ತೆ ಕಾಮಗಾರಿ ಆರಂಭವಾಗುವ ಸಾಧ್ಯತೆ ಕಾಣುತ್ತಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡದ ಜಿಲ್ಲಾ ಕಾರ್ಯಪಾಲಕ ಅಭಿಯಂತರರ ನಿರ್ಲಕ್ಷವೇ ಕಾಮಗಾರಿ ವಿಳಂಬಕ್ಕೆ ಕಾರಣ ಎಂದು ಅಲ್ಲಿನ ಗ್ರಾಮಸ್ಥರು ‘ಶಕ್ತಿ’ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
-ವರದಿ: ಟಿ.ಎಲ್.ಶ್ರೀನಿವಾಸ್