ಮಡಿಕೇರಿ, ಏ.1 : ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿಯಲ್ಲಿ ಪ್ರಮುಖರ ಹೆಸರು ಮತ್ತು ಕುಟುಂಬದವರ ಹೆಸರು ಇದೆಯೇ ಎಂಬದನ್ನು ಖಾತರಿ ಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಗಳು, ಸಹಾಯಕ ಚುನಾವಣಾಧಿಕಾರಿ ಗಳು ಹಾಗೂ ನೋಡಲ್ ಅಧಿಕಾರಿಗಳೊಂದಿಗೆ ಭಾನುವಾರ ಚುನಾವಣೆ ತಯಾರಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರ ಪಟ್ಟಿನಲ್ಲಿ ಪ್ರಮುಖರು ಹಾಗೂ ಅವರ ಕುಟುಂಬದವರ ಹೆಸರು ಇರಬೇಕು. ಆದ್ದರಿಂದ ಈಗಿನಿಂದಲೇ ಈ ಬಗ್ಗೆ ಗಮನಹರಿಸುವಂತೆ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು 4 ಸಾವಿರ ಅರ್ಜಿಗಳು ಬಂದಿದ್ದು, ಇದರಲ್ಲಿ 250 ಅರ್ಜಿಗಳಿಗೆ ಮತದಾರರ ಗುರುತಿನ ಚೀಟಿ ನೀಡಲಾಗಿದೆ. ಉಳಿದವುಗಳನ್ನು ತ್ವರಿತವಾಗಿ ಪರಿಶೀಲಿಸಿ ಮತದಾರರ ಗುರುತಿನ ಚೀಟಿ ನೀಡಲು ತುರ್ತು ಕ್ರಮ ವಹಿಸುವಂತೆ ತಹಶೀಲ್ದಾರರಿಗೆ ತಿಳಿಸಿದರು.

ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ವಿವಿಧ ತಂಡಗಳೊಂದಿಗೆ ಸಮನ್ವಯತೆ ಸಾಧಿಸಿ ಹದ್ದಿನ ಕಣ್ಣಿಟ್ಟು ಚುನಾವಣೆಯಲ್ಲಿ ಯಾವದೇ ರೀತಿಯ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಅಕ್ರಮಗಳು ಕಂಡುಬಂದಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ನೋಡಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನೋಡಲ್ ಅಧಿಕಾರಿಗಳು ಪ್ರತಿನಿತ್ಯ ತಮ್ಮ ಕ್ಷೇತ್ರ ವ್ಯಾಪ್ತಿಯ ಮಾಹಿತಿಯನ್ನು ನೀಡಬೇಕು. ಚುನಾವಣಾಧಿಕಾರಿಗಳು ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರಬೇಕು .

ಚುನಾವಣೆಯಲ್ಲಿ ಎಲ್ಲರಿಗೂ ಸಮಾನ ಅಧಿಕಾರವಿದೆ ಎಂಬದನ್ನು ಅರ್ಥಮಾಡಿಕೊಂಡು ಜವಾಬ್ದಾರಿ ಯಿಂದ ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರಜೆ ಪಡೆಯುವಂತಿಲ್ಲ. ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳ ಸಭೆ ಸಮಾರಂಭ ಅನುಮತಿ ನೀಡುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಎನ್‍ಒಸಿ ಪಡೆಯಲಾಗಿದೆಯೇ ಎಂಬದನ್ನು ಪರಿಶೀಲಿಸಬೇಕು. ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗೆ ಅನುಮತಿ ನೀಡುವ ಅಧಿಕಾರ ಆಯಾಯ ವಿಧಾನಸಭೆ ಕ್ಷೇತ್ರಕ್ಕೆ ನಿಯೋಜನೆ ಗೊಂಡಿರುವ ಚುನಾವಣಾಧಿಕಾರಿ ಯದ್ದಾಗಿದೆ ಎಂದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ಮಾರಾಟ ಹೆಚ್ಚಳವಾಗಿದೆ. ಇದಕ್ಕೆ ಕಾರಣವೇನು, ಯಾವ ಯಾವ ಕಡೆಗಳಲ್ಲಿ ಮದ್ಯ ಸಂಗ್ರಹಿಸಿರಬಹುದು ಎಂಬ ಬಗ್ಗೆ ನಿಖರ ಮಾಹಿತಿ ಪಡೆದು ಪತ್ತೆಹಚ್ಚುವಂತೆ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಉಪ ವಿಭಾಗಾಧಿಕಾರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ರಾಜು ಅವರು ಚುನಾವಣಾಧಿಕಾರಿಯಾಗಿ (ಆರ್‍ಒ) ನಿಯೋಜಿಸಲಾಗಿದ್ದು, ತಮ್ಮ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಹೇಳಿದರು.

ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿನ ಹಾಡಿಗಳು ಸೇರಿದಂತೆ ಅಲ್ಲಿನ ಕುಟುಂಬದವರಿಗೆ ಮತದಾನದÀ ಗುರುತಿನ ಚೀಟಿ ನೀಡಲಾಗಿದೆಯೆ ಎಂಬದನ್ನು ತ್ವರಿತವಾಗಿ ಪರಿಶೀಸು ವಂತೆ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚುನಾವಣೆಗೆ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ವ್ಯಾಪಕ ಸಂಚಾರ ಕೈಗೊಳ್ಳಬೇಕು. ಅಕ್ರಮಗಳು ಕಂಡುಬಂದರೆ ಕೂಡಲೇ ಜಪ್ತಿ ಮಾಡಿ, ಮಾಹಿತಿ ನೀಡಬೇಕು ಎಂದು ಸಿಇಒ ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಜಿಲ್ಲೆಯ ಚೆಕ್‍ಪೋಸ್ಟ್‍ಗಳಲ್ಲಿ ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಬ್ಯಾನರ್, ಪೋಸ್ಟರ್ ಮತ್ತು ಬಂಟಿಂಗ್ಸ್‍ಗಳನ್ನು ಅಳವಡಿಸುವಂತಿಲ್ಲ, ಇಂತಹದು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡಬೇಕಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಅವರು ಮತಗಟ್ಟೆ ಕೇಂದ್ರಗಳ ಅಂತಿಮ ಪಟ್ಟಿಯ ವರದಿ ನೀಡಬೇಕಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.

ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳ ನಿಯೋಜನೆ ಸಂಬಂಧ ವರದಿಯನ್ನು ಒದಗಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದರು.

ಚುನಾವಣಾಧಿಕಾರಿ ರಾಜು, ಸಹಾಯಕ ಚುನಾವಣಾಧಿಕಾರಿಗಳಾದ ಗೋವಿಂದ ರಾಜು, ಶಾರದಾಂಭ, ಬಾಡಕರ್, ನೋಡಲ್ ಅಧಿಕಾರಿಗಳಾದ ವಾಲ್ಟರ್ ಡಿಮೆಲ್ಲೊ, ಮಂಜುಳಾ, ಸುಂದರರಾಜ್, ಪ್ರಭು, ರಾಜಕುಮಾರ ರೆಡ್ಡಿ, ಬಿ.ಶುಭಾ, ಸಿ.ಜಗನ್ನಾಥ್, ಪ್ರಮೋದ್, ಗಂಗಾಧರ, ಸಿದ್ದೇಶ, ಅಜಿತ್ ಇತರರು ಇದ್ದರು.